ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ರೈಡ್ ಮಾಡುವ ಮೂಲಕ ಶಾಕ್ ನೀಡಿದೆ.
ಬೀದರ್, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರಿಗೆ ಚಳಿ ಬಿಡಿಸಿದ್ದಾರೆ.
ಬೀದರ್‌ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಸುನಿಲ್ ಕುಮಾರ್ ಚಂದ್ರಪ್ರಭಾ ನಿವಾಸದ ಮೇಲೆ ದಾಳಿ ಮಾಡಿದ ಅಧಿಕಾರಿಗಳು,ದಾಖಲೆ ಪರಿಶೀಲಿಸುತ್ತಿದ್ದಾರೆ.
ಬೀದರ್ ನಗರದ ಜೈಲ್ ಕಾಲೋನಿಯ ಎಸ್‌ಬಿಪಿ ನಗರದ ನಿವಾಸದ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ದಾಖಲೆಗಳ ತೀವ್ರ ಪರಿಶೀಲನೆ ಮಾಡುತ್ತಿದ್ದಾರೆ.
ಅವರು ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಬಿ ಗ್ರಾಮದ ನಿವಾಸಿಯಾಗಿದ್ದು, ಸದ್ಯ ಕಲಬುರ್ಗಿಯಲ್ಲಿ ಕರ್ತವ್ಯ ಮಾಡುತ್ತಿದ್ದಾರೆ. ಹೀಗಾಗಿ, ಕಲಬುರ್ಗಿಯ ಆರೋಗ್ಯ ಇಲಾಖೆಯ ಕಚೇರಿ ಹಾಗೂ ನಿವಾಸದ ಮೇಲೂ ದಾಳಿ ಮಾಡಲಾಗಿದೆ.
ತುಮಕೂರಿನಲ್ಲಿ ಕೆಐಎಡಿಬಿ ಕಚೇರಿ ಮೇಲೆ ದಾಳಿ ಮಾಡಲಾಗಿದ್ದು,ಎಇಇ ರಾಜೇಶ್ ಅವರ ಕಚೇರಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ತಿಂಗಳ ಹಿಂದಷ್ಟೇ ತುಮಕೂರಿನ ಕೆಐಎಡಿಬಿ ಕಚೇರಿಗೆ ರಾಜೇಶ್ ಬಂದಿದ್ದರು.
ಕೊಪ್ಪಳದಲ್ಲಿ ಎರಡು ಕಡೆ ದಾಳಿ ಲೋಕಾ ಅಧಿಕಾರಿಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಶೇಕು ಚೌಹಾಣ್‌ಗೆ ಸೇರಿದ ಎರಡು ಮನೆ, ಅಭಿಷೇಕ್ ಬಡಾವಣೆ ಹಾಗೂ ಕೀರ್ತಿ ಕಾಲೋನಿಯಲ್ಲಿರುವ ಮನೆಗಳ ಮೇಲೂ ದಾಳಿ ಮಾಡಲಾಗಿದೆ.
ಬಳ್ಳಾರಿಯ ಸ್ವಗ್ರಾಮ ಕಲ್ಲುಕಂಬದ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರು ಟೌನ್ ಆ್ಯಂಡ್ ರೂರಲ್ ಪ್ಲಾಬಿಂಗ್ ಆಫೀಸರ್ ಆಗಿರುವ ಮಾರುತಿ ಬಗಲಿ ಮೂಲತಃ ಬಳ್ಳಾರಿಯ ಕಲ್ಲುಕಂಬ ನಿವಾಸಿ. ಬಳ್ಳಾರಿ ಮಾತ್ರವಲ್ಲದೇ ರಾಜ್ಯದ ವಿವಿಧ ಕಡೆ ಮಾರುತಿ ಬಗಲಿ ಅಕ್ರಮ ಆಸ್ತಿ ಮಾಡಿದ್ದಾರೆಂಬ ಆರೋಪವಿದೆ.
ಕೊಪ್ಪಳದ ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಟ್ಯಾಕ್ಸ್ ಉಪ ನಿರ್ದೇಶಕ ಶೆಕು ಚೌಹಾಣ್ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ
ಮೈಸೂರಿನಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಉಪ ವಿಭಾಗಧಿಕಾರಿ ವೆಂಕಟರಾಮ್, ಕೌಶಲ್ಯಾಭಿವೃದ್ದಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ ಅವರುಗಳ ನಿವಾಸದಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.