ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 6,505 ಪ್ರಕರಣ ಇತ್ಯರ್ಥ

Spread the love

ಮೈಸೂರು: ಮೈಸೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 6,505 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಅವರ ನಿರ್ದೇಶನದಂತೆ ಮೈಸೂರು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್‌ ಹಮ್ಮಿಕೊಳ್ಳಲಾಯಿತು.

ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,18,974 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 58,688 ಸಿವಿಲ್ ಪ್ರಕರಣಗಳು ಹಾಗೂ 60,286 ಕ್ರಿಮಿನಲ್ ಪ್ರಕರಗಳು.

ಸದರಿ ಪ್ರಕರಣಗಳಲ್ಲಿ 19,363 ರಾಜಿಯಾಗಬಹುದಾದ ಪ್ರಕರಣಗಳಿದ್ದು, ಅವುಗಳ ಪೈಕಿ 9,126 ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು. ರಾಜಿ ಸಂಧಾನಕ್ಕಾಗಿ ತೆಗೆದುಕೊಂಡ ಪ್ರಕರಣಗಳಲ್ಲಿ (ನ್ಯಾಯಾಲಯದಲ್ಲಿ ಬಾಕಿ ಇರುವ) 6,505 ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ.

ಈ ಬಾರಿ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ ಮೈಸೂರು ನಗರ ಹಾಗೂ ಮೈಸೂರು ತಾಲ್ಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 31 ದಂಪತಿಗಳು ತಮ್ಮ ಮಧ್ಯದ ವಾಜ್ಯಗಳನ್ನು ಬಗೆಹರಿಸಿಕೊಂಡು ಒಂದಾದರು.

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟಾರೆ 6,505 ನ್ಯಾಯಾಲಯದಲ್ಲಿ ಬಾಕಿಯಿದ್ದ ಪ್ರಕರಣಗಳು ತೀರ್ಮಾನವಾಗಿವೆ.

ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಸಂಧಾನ ಮೂಲಕ ಒಟ್ಟು 36,36,02,361ರೂ ಗಳು ಇತ್ಯರ್ಥವಾಗಿದೆ.

ಇದಕ್ಕೆ ಸಹಕರಿಸಿದ ವಕೀಲರ ಸಂಘದ ಪದಾಧಿಕಾರಿಗಳು, ಎಲ್ಲಾ ವಕೀಲರುಗಳು ಹಾಗೂ ಕಕ್ಷಿಗಾರರು, ಪೊಲೀಸ್ ಇಲಾಖೆಯನ್ನೊಳಗೊಂಡಂತೆ ಎಲ್ಲಾ ಇಲಾಖೆಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.