ಜನತೆಯನ್ನು ಕುಡುಕರಾಗಿಸುವ ಸರ್ಕಾರದ ನೀತಿ ಒಪ್ಪಲಾಗದು:ಮುಖ್ಯ ಮಂತ್ರಿ ಚಂದ್ರು

ಬೆಂಗಳೂರು: ಜನತೆಯನ್ನು ಕುಡುಕರನ್ನಾಗಿಸುವ ಸರ್ಕಾರದ ನೀತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷದ‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಮಧ್ಯ ಹಾಗೂ ಡ್ರಗ್ಸ್ ಹಾವಳಿಯಿಂದಾಗಿ ಯುವಜನತೆ ಮತ್ತು ಸಮಾಜ ನೈತಿಕ ಅಧಃಪತನಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಸರ್ಕಾರವು ಮತ್ತಷ್ಟು ಮಧ್ಯದ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.

ಪಕ್ಕದ ತಮಿಳುನಾಡು, ಕೇರಳ ಇನ್ನಿತರ ರಾಜ್ಯಗಳಲ್ಲಿ ಊರಾಚೆ ಮಧ್ಯದ ಅಂಗಡಿಗಳು ಇವೆ. ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಂಪೂರ್ಣ ಮದ್ಯಪಾನ ನಿಷಿದ್ಧವಾಗಿದೆ.ಈ ಹಿಂದೆ ಬಂಗಾರಪ್ಪ ಸರ್ಕಾರದ ಅವಧಿಯಲ್ಲಿ ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಲೈಸೆನ್ಸ್ ಗಳನ್ನು ನೀಡಿದ ಪರಿಣಾಮದಿಂದ ಈಗಾಗಲೇ ಸಮಾಜವು ದುಷ್ಪರಿಣಾಮವನ್ನು ಎದುರಿಸುವಂತಾಗಿದೆ ಎಂದು ಚಂದ್ರು‌ ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರವು ಯುವಜನತೆಯನ್ನು ನಶೆ ಮುಕ್ತರನ್ನಾಗಿಸಲು ಅಲ್ಲಲ್ಲಿ ಕೇಂದ್ರಗಳನ್ನು ತೆರೆಯುವುದನ್ನು ಬಿಟ್ಟು ಸರ್ಕಾರವೇ ಎಂ ಎಸ್ ಐ ಎಲ್ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಮಧ್ಯದ ಅಂಗಡಿಗಳನ್ನು ತೆರೆದು ಜನತೆಯನ್ನು ಮತ್ತಷ್ಟು ಕುಡುಕರನ್ನಾಗಿಸುತ್ತಿದೆ. ಅಲ್ಲದೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ವೈಫಲ್ಯಗಳಿಂದಾಗಿ ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಮಧ್ಯ ರಾಜಾರೋಶವಾಗಿ ಸರಬರಾಜಾಗುತ್ತಿದೆ. ಇವುಗಳನ್ನು ತಡೆಗಟ್ಟುವುದನ್ನು ಬಿಟ್ಟು ಮುಖ್ಯಮಂತ್ರಿಗಳೇ ಮುಂದೆ ನಿಂತು ತಮ್ಮ ಕಮಿಷನ್ ಧನದಾಹದಿಂದ ಮತ್ತಷ್ಟು ಲೈಸೆನ್ಸ್ ಗಳನ್ನು ವಿತರಿಸಲು ಹೊರಟಿರುವುದನ್ನು ರಾಜ್ಯದ ಮಹಿಳೆಯರು ಸೇರಿದಂತೆ ಯಾರು ಸಹ ಒಪ್ಪುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸಮಾಜವನ್ನು ಹಾಳು ಗೆಡವಿ ಅಬಕಾರಿ ಆದಾಯದಿಂದಲೇ ಸರ್ಕಾರವನ್ನು ನಡೆಸಲು ಹೊರಟಿರುವ ಮುಖ್ಯಮಂತ್ರಿಗಳ ಆರ್ಥಿಕ ನೀತಿಯ ವಿರುದ್ಧ ಆಮ್ ಆದ್ಮಿ ಪಕ್ಷವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.