ಹಬ್ಬದ ರೀತಿಯಲ್ಲಿ ವಿದ್ಯಾಭ್ಯಾಸ ಸಂಭ್ರಮಿಸಿ: ಎಂ ರಾಮ್ ಪ್ರಸಾದ್

ನಂಜನಗೂಡು,ಜೂ.2: ವಿದ್ಯಾಭ್ಯಾಸವನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಿ ಅಭ್ಯಾಸ ಮಾಡಿದರೆ ಖಂಡಿತಾ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ. ರಾಮ್ ಪ್ರಸಾದ್ ತಿಳಿಸಿದರು.

ಕಾಲೇಜಿನ ಈ ವರ್ಷದ ಪ್ರಾರಂಭೋತ್ಸವದ ಕಾರ್ಯಕ್ರಮದ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಿಗೆ ಇಲಾಖೆ ನೀಡಿದ ದಿನಚರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಪ್ರಾಂಶುಪಾಲ ಸಿ.ಆರ್.ದಿನೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಮೊದಲ ದಿನದ ಹುರುಪು ವಿದ್ಯಾಭ್ಯಾಸದ ಕೊನೆಯ ದಿನವರೆಗೂ ವಿದ್ಯಾರ್ಥಿಗಳಲ್ಲಿ ಇದ್ದಾಗ ಮಾತ್ರ ಆ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ, ಜೀವನದಲ್ಲಿ ಸಫಲತೆ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಕಾಲೇಜಿನ ಹಿರಿಯ ಉಪನ್ಯಾಸಕ ಸಿ. ಎಸ್ ಲಿಂಗಣ್ಣ ಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಕಾಲೇಜಿನಲ್ಲಿ ಇರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿ ಸಿಹಿ ವಿತರಿಸಲಾಯಿತು. ರಂಗ ಸ್ವಾಮಿ, ಹೆಚ್ಚ್.ಕೆ ಪ್ರಕಾಶ್, ಎನ್. ದಿನೇಶ್ ಮತ್ತಿತರರು ಹಾಜರಿದ್ದರು.