ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ:ಪತ್ನಿ,ಪ್ರಿಯತಮನಿಗೆ ಜೀವಾವಧಿ ಶಿಕ್ಷೆ

Spread the love

ಚಾಮರಾಜನಗರ/ಕೊಳ್ಳೇಗಾಲ: ವಿವಾಹಿತೆ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಆತನ ಜತೆ‌ ಸೇರಿ ಪತಿಯನ್ನು ಕೊಂದಿರುವುದು ಸಾಬೀತಾದ ಹಿನ್ನೆಲೆಯಲ್ಲಿ
ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಿಮಾಳ ಗ್ರಾಮದ ರಾಜಶೇಖರಮೂರ್ತಿ ಕೊಲೆಯಾದ ದುರ್ದೈವಿ.

ಆರೋಪಿಗಳಾದ ರಾಜಶೇಖರ್ ಅವರ ಪತ್ನಿ ನಂದಿನಿ ಮತ್ತು ಆಕೆಯ ಪ್ರಿಯಕರ ದಿನಕರನಿಗೆ ಅಪರ ಜಿಲ್ಲಾ ಮತ್ತು ಸತ್ರ‌ ನ್ಯಾಯಾಲಯದ ನ್ಯಾಧೀಶರಾದ‌ ಟಿ.ಸಿ.ಶ್ರೀಕಾಂತ್ ಅವರು ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿದ್ದಾರೆ.

ವಿವರ:
ರಾಜಶೇಖರಮೂರ್ತಿ ಅವರೊಂದಿಗೆ ನಂದಿನಿ ಮದುವೆಯಾಗಿ ಕಳೆದ 13 ವರ್ಷಗಳಿಂದ ಸಂಸಾರ ನಡೆಸುತ್ತಾ ಪ್ರಾರಂಭದಲ್ಲಿ ಅನ್ನೋನ್ಯವಾಗಿದ್ದಳು.

ನಂತರ ದಿನಕರನೊಂದಿಗೆ ಆಕ್ರಮ ಸಂಬಂಧವನ್ನಿಟ್ಟುಕೊಂಡಿದ್ದಳು. ಇದೇ ವಿಚಾರಕ್ಕೆ ಗಲಾಟೆಯಾಗಿ ಗ್ರಾಮದ ಮುಖಂಡರ ಸಮಕ್ಷಮದಲ್ಲಿ 2-2-2021 ಮತ್ತು 20-4-2021 ರಂದು ನ್ಯಾಯ ಪಂಚಾಯ್ತಿ ಸೇರಿಸಿ ಪ್ರತ್ಯೇಕ ಒಪ್ಪಂದ ಮಾಡಿಸಿ ಒಟ್ಟು 3 ಒಪ್ಪಂದ ಪತ್ರಗಳನ್ನು ಮಾಡಿಸಲಾಗಿತ್ತು.

ಆದರೂ ನಂದಿನಿ ಮತ್ತು ದಿನಕರ ಪುನಃ ಸಂಪರ್ಕದಲ್ಲಿದ್ದರು.23-06-2021 ರಂದು ರಾಜಶೇಖರಮೂರ್ತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ದಿನಕರ ಮನೆಗೆ ಬಂದಿದ್ದಾನೆ.

ಸ್ವಲ್ಪ ಹೊತ್ತಿನಲ್ಲೇ ರಾಜಶೇಖರಮೂರ್ತಿ ಕೂಡಾ ಮನೆಗೆ ಬಂದಿದ್ದಾರೆ. ಆಗ ನಂದಿನಿ ಮತ್ತು ದಿನಕರ ಜೊತೆಯಲ್ಲಿ ಇದ್ದುದ್ದನ್ನು ನೋಡಿ ಆಕ್ರೋಶಗೊಂಡು ದಿನಕರನ ಮೇಲೆ ಗಲಾಟೆ ಮಾಡಿದ್ದಾರೆ.

ಆಗ ನಂದಿನಿ ಮನೆಯಲ್ಲಿದ್ದ ಖಾರದ ಪುಡಿಯನ್ನು ಗಂಡನ ಕಣ್ಣಿಗೆ ಎರಚಿ ಮಮ್ಮಟ್ಟಿಗೆ ಹಾಕುವ ಕಾವಿನಿಂದ ರಾಜಶೇಖರಮೂರ್ತಿ ಅವರ ತಲೆಗೆ ಹೊಡೆದಿದ್ದಾಳೆ. ನಂತರ ದಿನಕರ ಕೂಡಾ ಅದೇ‌ ಕಾವು ಪಡೆದು ರಾಜಶೇಖರಮೂರ್ತಿ ಅವರ ಮುಖಕ್ಕೆ ಹೊಡೆದಾಗ ಆತ ಪ್ರಜ್ಞೆ ತಪ್ಪಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.ಅವರ ಮೂಗಿನಿಂದ ರಕ್ತ ಬಂದುದನ್ನು ಕಂಡು ಆರೋಪಿಗಳಿಬ್ಬರೂ ಈ ಕೃತ್ಯವನ್ನು ಮರೆಮಾಚುವ ಸಲುವಾಗಿ ರಾಜಶೇಖರಮೂರ್ತಿಯ ಕೈ ಕಾಲು ಹಿಡಿದು ವಾಸದ ಮನೆಯ ಹಿಂಭಾಗದಲ್ಲಿರುವ ಟಾಯ್ಲೆಟ್ ಗುಂಡಿಯಲ್ಲಿ ತಲೆ ಕೆಳಗಾಗಿ ಹಾಕಿ ಟಾಯ್ಲೆಟ್ ಗುಂಡಿಯ ಸಿಮೆಂಟ್ ಪ್ಲೇಟನ್ನು ಮುಚ್ಚಿಬಿಟ್ಟಿದ್ದಾರೆ.

ಜತೆಗೆ ರಾಜಶೇಖರಮೂರ್ತಿಯ ಬಟ್ಟೆಗಳು, ಹಲ್ಲೆಗೆ ಉಪಯೋಗಿಸಿದ ಕಾವು ನೆಲದ ಮೇಲೆ ಬಿದ್ದಿದ್ದ ರಕ್ತವನ್ನು ಶ್ಯಾಂಪು ಪ್ಯಾಟ್ ಬಳಸಿ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ.

ನಂತರ ನಂದಿನಿ ಧರಿಸಿದ್ದ ನೈಟಿಯನ್ನು ಒಗೆದು ಸಾಕ್ಷಿ ನಾಶಪಡಿಸಿ ಮಾರನೇ ದಿನ ಏನೂ ತಿಳಿಯದವಳಂತೆ ರಾಜಶೇಖರಮೂರ್ತಿ ಕೆಲಸಕ್ಕೆ ಹೋಗಿದ್ದಾನೆಂದು ಆತನ ತಂದೆ ತಾಯಿಗೆ ತಿಳಿಸಿದ್ದಾಳೆ.

ರಾಜಶೇಖರಮೂರ್ತಿ ಅವರ ಸಹೋದರಿಯ ಮಕ್ಕಳನ್ನು ಬಳಸಿಕೊಂಡು ಟಾಯ್ಲೆಟ್ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದಾರೆ.

ಒಂದೆರಡು ದಿನವಾದರೂ ಮಗ ಕಾಣದೆ ಹೋದಾಗ ರಾಜಶೇಖರಮೂರ್ತಿ ಅವರ ತಂದೆ ಮಗ ಕಾಣೆಯಾದ ಬಗ್ಗೆ ಠಾಣೆಗೆ ದೂರನ್ನು ನೀಡಿದ್ದಾರೆ.

ನಂತರ ಮನೆಯ ಹಿಂಭಾಗ ಟಾಯ್ಲೆಟ್ ಗೊಂಡಿಯ ಸುತ್ತ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿ ಅನುಮಾನದಿಂದ ಗುಂಡಿಯ ಸಿಮೆಂಟ್ ಪ್ಲೇಟನ್ನು ಗ್ರಾಮಸ್ಥರ ಸಮ್ಮುಖದಲ್ಲಿ ತೆಗೆಸಿ ನೋಡಿದಾಗ ರಾಜಶೇಖರಮೂರ್ತಿಯ ಶವ ಕೊಳೆತ ಸ್ಥಿತಿಯಲ್ಲಿದ್ದುದು ಕಂಡುಬಂದಿದೆ.

ನಂತರ ಮಗನ ಕೊಲೆಯಾದ ಬಗ್ಗೆ ತಂದೆ ನೀಡಿದ ದೂರಿನ ಆಧಾರದಲ್ಲಿ ತನಿಖಾಧಿಕಾರಿ ಸಂತೋಷ್ ಕಶ್ಯಪ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರ ರಣದಲ್ಲಿ ಎ 1 ಆರೋಪಿ ನಂದಿನಿ,ಎ2 ಆರೋಪಿ ದಿನಕರ ವಿರುದ್ಧ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು 50,000 ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಸಿ.ಡಿ ಗಿರೀಶ್, ಸರ್ಕಾರಿ ಅಭಿಯೋಜಕರು, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಳ್ಳೇಗಾಲ ಇವರು ಸರ್ಕಾರದ ಪರವಾಗಿ, ವಾದ ಮಂಡಿಸಿದರು.