ಮೈಸೂರು: ರಸ್ತೆ ಮತ್ತು ಮನೆಗಳಿರುವ ಜಾಗಕ್ಕೆ 11ಇ ಸ್ಕೆಚ್ ವಿತರಿಸಿ ಅಕ್ರಮವೆಸಗಿದ ಆರೋಪ ಸಾಬೀತಾದ ಹಿನ್ನಲೆ ಲೈಸೆನ್ಸ್ ಸರ್ವೆಯರ್ ಎ.ಟಿ.ನಾಗರಾಜ್ ರನ್ನ ಅಮಾನತುಪಡಿಸಲಾಗಿದೆ.
ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಾದ ರಮ್ಯಾ ರವರು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಶ್ರೀ ಚಾಮುಂಡೇಶ್ವರಿ ರೆವಿನ್ಯೂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ದೂರು ನೀಡಿ ನ್ಯಾಯ ಒದಗಿಸುವಂತೆ ಪತ್ರ ಬರೆದಿದ್ದರು.ದಾಖಲೆಗಳನ್ನ ಪರಿಶೀಲಿಸಿದಾಗ 11ಇ ಸ್ಕೆಚ್ ವಿತರಿಸುವ ವೇಳೆ ಲೈಸೆನ್ಸ್ ಸರ್ವೆಯರ್ ಎ.ಟಿ ನಾಗರಾಜ್ ಅಕ್ರಮ ಎಸಗಿರುವುದು ಖಚಿತವಾದ ಹಿನ್ನಲೆ ಅಮಾನತು ಆದೇಶ ಹೊರಡಿಸಲಾಗಿದೆ.
ಮೈಸೂರು ಜಿಲ್ಲೆ ಕಸಬಾ ಹೋಬಳಿ ಶ್ಯಾದನಹಳ್ಳಿ ಗ್ರಾಮದ ಸರ್ವೆ ನಂ 72/1 ಹಾಗೂ 72/11 ರ ಜಮೀನು ಮಾಲೀಕರಾದ ಪುಟ್ಟಪ್ಪ ಎಂಬುವರು ರೆವಿನ್ಯೂ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ.ಕ್ರಯಪತ್ರ ಪಡೆದವರು ಗ್ರಾಮ ಪಂಚಾಯ್ತಿಯಲ್ಲಿ ಖಾತೆ ಮಾಡಿಸಿಕೊಂಡು ಮನೆಗಳನ್ನ ನಿರ್ಮಿಸಿ ವಾಸವಿದ್ದಾರೆ.ಪುಟ್ಟಪ್ಪ ಅವರು ಮರಣಹೊಂದಿದ ನಂತರ ಅವರ ಮಕ್ಕಳು ಪೌತಿಖಾತೆ ಮಾಡಿಸಿಕೊಂಡು ಮನೆಗಳಲ್ಲಿ ವಾಸವಿರುವ ಜನರಿಗೆ ತೊಂದರೆ ಕೊಡುತ್ತಿದ್ದಾರೆ.MR/H3/28-7-2022 ನ್ನು ರದ್ದುಪಡಿಸಿ ಕೊಡಬೇಕು ಹಾಗೂ ಮನೆಗಳಿರುವ ಜಾಗಕ್ಕೆ ಅಕ್ರಮವಾಗಿ ತತ್ಕಾಲ್ ಪೋಡಿ ಮಾಡಿ ಸರ್ವೆ ನಂ.72/11 ರಿಂದ 72/20 ಎಂದು 5 1/4 ಗುಂಟೆ ಪ್ರದೇಶಕ್ಕೆ ಮಾಡಿರುವ ಪೋಡಿಯನ್ನ ರದ್ದುಪಡಿಸಿ ಎಡಿಎಲ್ ಆರ್ ಸರ್ವೆಯರ್ ಎ.ಟಿ.ನಾಗರಾಜ್ ಹಾಗೂ ಆರ್.ಐ.ಮತ್ತು ವಿಎ ಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸಂಘ ದೂರು ನೀಡಿತ್ತು.
ದೂರಿನ ಅನ್ವಯದಂತೆ ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಮಂಜುನಾಥ್ ಅವರು ದಾಖಲೆಗಳನ್ನು ಪರಿಶೀಲಿಸಿದಾಗ ಸಾರ್ವಜನಿಕರು ಓಡಾಡುವ ರಸ್ತೆ ಹಾಗೂ ಮನೆಗಳಿರುವ ಜಾಗ 5 1/4 ಗುಂಟೆ ಪ್ರದೇಶಕ್ಕೆ ಅಕ್ರಮವಾಗಿ 11ಇ ಸ್ಕೆಚ್ ವಿತರಿಸಿರುವುದು ಕಂಡುಬಂದಿದೆ.
ಮಂಜುನಾಥ್ ಅವರು ನೀಡಿದ ವರದಿ ಅನ್ವಯದಂತೆ ಅಕ್ರಮ ಎಸಗಿದ ಲೈಸೆನ್ಸ್ ಸರ್ವೆಯರ್ ಎ.ಟಿ.ನಾಗರಾಜ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
