ಗ್ರಂಥಾಲಯ ಉಳಿಸಿ ಬೆಳೆಸಿ ಎಂದಅಪ್ಪಟ ಕನ್ನಡ ಪ್ರೇಮಿ ಸೈಯದ್

Spread the love

ಮೈಸೂರು: ಕರ್ನಾಟಕ ಸೇರಿದಂತೆ ಪ್ರಪಂಚದ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿರುವ ಅಪ್ಪಟ ಕನ್ನಡ ಪ್ರೇಮಿ ಮೈಸೂರಿನ ಪ್ರಸಿದ್ಧ ಗ್ರಂಥಾಲಯದ ರೂವಾರಿ ಸೈಯದ್ ಅವರು ತಮ್ಮ ಗ್ರಂಥಾಲಯವನ್ನು ಉಳಿಸಿ ಬೆಳೆಸಬೇಕೆಂದು ಮನವಿ ಮಾಡಿದ್ದಾರೆ.

ರಾಜೀವ್ ನಗರದಲ್ಲಿ ಸೈಯದ್ ಅವರು 14 ವರ್ಷಗಳ ಹಿಂದೆ ಕಷ್ಟ ಪಟ್ಟು ಪ್ರಾರಂಭಿಸಿರುವ ಸಾರ್ವಜನಿಕ‌ ಗ್ರಂಥಾಲಯ ಮುಚ್ಚುವ ಆತಂಕದ ಹಿನ್ನೆಲೆಯಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹಾಗೂ ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ,
ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮಹಾನ್ ಶ್ರೇಯಸ್ ಹಾಗೂ ಮತ್ತಿತರರು ಗ್ರಂಥಾಲಯಕ್ಕೆ ಭೇಟಿ ನೀಡಿ,ಗ್ರಂಥಾಲಯದ ವಿದ್ಯುತ್ ಬಿಲ್ ಹಾಗೂ ಪತ್ರಿಕೆಗೆ ಸಹಾಯ ಮಾಡಿದರು.

ಈ ವೇಳೆ ಮಾತನಾಡಿದ ಸೈಯದ್ ಭಾವುಕರಾಗಿ ತಮ್ಮ ಅಳಲು ತೋಡಿಕೊಂಡು ಲೈಬ್ರರಿಯನ್ನು ಉಳಿಸಿಕೊಡಿ ಎಂದು ಮನವಿ ಮಾಡಿದರು

ಮೊದಲು ನನಗೆ ಶಕ್ತಿ ಇತ್ತು ದುಡಿದು ಈ ಗ್ರಂಥಾಲಯವನ್ನು ನಡೆಸುತ್ತಾ ಇದ್ದೆ ಈಗ ಒಂದುವರೆ ತಿಂಗಳಿನಿಂದ ನನಗೆ ಆರೋಗ್ಯ ಸರಿ ಇಲ್ಲ ಎರಡು ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಲಾಗಿಲ್ಲ ಪ್ರತಿ ತಿಂಗಳು 1,200,1500 ರೂ ಬಿಲ್ ಬರುತ್ತದೆ ಪತ್ರಿಕೆ ಬಿಲ್ ಕಟ್ಟಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ನಾನು ಇದೀನಿ ನಾಳೆ ಹೋಗುತ್ತೇನೆ ಆದರೆ ಈ ಗ್ರಂಥಾಲಯ ಶಾಶ್ವತವಾಗಿ ಉಳಿಯಬೇಕು ಎಂಬುದು ನನ್ನ ಮಹಾದಾಸೆ. ಗ್ರಂಥಾಲಯ ಪ್ರಾರಂಭವಾಗಿ 14 ವರ್ಷ ತುಂಬಿದೆ ಮಕ್ಕಳು ವಿದ್ಯಾರ್ಥಿಗಳು ದೊಡ್ಡವರು ಬಂದು ಇಲ್ಲಿ ಓದುತ್ತಾರೆ ಕೆಲವರು ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದುತ್ತಾರೆ ವಾಪಸು ತಂದು ಕೊಡುತ್ತಾರೆ ಕೆಲವರು ತರದಿದ್ದರೆ ನಾನೇ ಅಂತವರ ಮನೆಗೆ ಹೋಗಿ ವಾಪಸು ತರುತ್ತೇನೆ ಎಲ್ಲರಿಂದಲೂ ಆಧಾರ್ ಕಾರ್ಡ್ ತೆಗೆದುಕೊಂಡು ಪುಸ್ತಕ ಕೊಡುತ್ತೇನೆ ಎಂದು ತಿಳಿಸಿದರು.

ಕನ್ನಡ ಭಾಷೆಯನ್ನು ಉಳಿಸಬೇಕು ಬೆಳೆಸಬೇಕು ಕನ್ನಡದ ನೆಲದಲ್ಲಿ ನಾವು ಕನ್ನಡ ಭಾಷೆಯನ್ನು ಮರೆತರೆ ಕನ್ನಡ ಉಳಿಯುವುದಾದರೂ ಹೇಗೆ ಎಂದು ಮುಗ್ಧವಾಗಿ ಪ್ರಶ್ನಿಸುತ್ತಾರೆ ಸೈಯದ್.

ಇಲ್ಲಿ 13 ವಾರ್ಡ್ ಗಳಿವೆ ಆದರೆ ಒಂದೂ ಗ್ರಂಥಾಲಯ ಇಲ್ಲ, ನನ್ನ ಗ್ರಂಥಾಲಯ ಸುಟ್ಟು ಹೋದಾಗ ಯಾವುದೇ ಸರ್ಕಾರ ಸಹಾಯ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಭಾಗದ ಶಾಸಕ ತನ್ವೀರ್ ಸೇಠ್ ಅವರಿಗೆ ಒಮ್ಮೆ ಗ್ರಂಥಾಲಯಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೇನೆ ಆದರೆ ಇದುವರೆಗೆ ಬರಲಿಲ್ಲ ಅದೇ ರೀತಿ ಯಾವ ಕಾರ್ಪೊರೇಟರ್ ಕೂಡ ಇಲ್ಲಿಗೆ ಬಂದಿಲ್ಲ ಎಂದು ಅತೀವ ಬೇಸರ ವ್ಯಕ್ತಪಡಿಸಿದರು.

ಗ್ರಂಥಾಲಯಕ್ಕೆ ಬಹಳಷ್ಟು ಜನ ಸಹಾಯ ಮಾಡಿದ್ದಾರೆ ಅದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಸಯ್ಯದ್ ಹೇಳಿದರು

ಈ ವೇಳೆ ಜೀವದಾರ ರಕ್ತನಿಧಿ ಕೇಂದ್ರದ ಗಿರೀಶ್ ಅವರು ಗ್ರಂಥಾಲಯಕ್ಕೆ ಪ್ರತಿ ತಿಂಗಳು ಎರಡು ಪತ್ರಿಕೆಯನ್ನು ತಮ್ಮ ಸಂಸ್ಥೆ ವತಿಯಿಂದ ತರಿಸಿಕೊಡುವುದಾಗಿ ಭರವಸೆ ನೀಡಿದರು.