ಬೆಂಗಳೂರು,ಏ.5: ಕಾನೂನು ಎಲ್ಲರಿಗೂ ಒಂದೇ. ಪೊನ್ನಣ್ಣಾಗೂ ಒಂದೇ, ಮಂಥರ್ ಗೌಡಾಗೂ ಒಂದೇ ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿನಯ್ ಸೋಮಯ್ಯ ಡೆತ್‌ನೋಟ್‌ನಲ್ಲಿ ಪೊನ್ನಣ್ಣ, ಮಂಥರ್ ಗೌಡ ಹೆಸರು ಉಲ್ಲೇಖವಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಎಲ್ಲರಿಗೂ ಒಂದೇ ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ. ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ. ಸಿಬಿಐಗೆ ನೀಡುವ ವಿಚಾರದ ಬಗ್ಗೆ ನಿರ್ಧಾರ ಆಗಿಲ್ಲ, ಅಗತ್ಯವಿದ್ದರೆ ನೋಡೋಣ ಎಂದು ಹೇಳಿದರು.
ಹಿಂದೆ ಫೆಬ್ರವರಿಯಲ್ಲಿ ನಡೆದಿರುವ ಘಟನೆಯಿಂದ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕುರಿತು ತನಿಖೆ ಮಾಡಲಾಗುತ್ತದೆ. ವಾಟ್ಸಪ್‌ನಲ್ಲಿ ಹಾಕಿರುವ ಸಂದೇಶದ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಮಡಿಕೇರಿಯಲ್ಲೂ ಎಫ್‌ಐಆರ್ ಆಗಿದೆ. ಇಲ್ಲೂ ಎಫ್‌ಐಆರ್ ಆಗಿದೆ. ಎಲ್ಲವೂ ಸಮಗ್ರ ತನಿಖೆ ಆಗುತ್ತದೆ. ತನಿಖೆ ಆದಮೇಲೆ ಇವರಿಬ್ಬರೂ, ವಿನಯ್ ಆತ್ಮಹತ್ಯೆಗೆ ಕಾರಣರಾಗಿದ್ದರಾ ಎಂದು ತಿಳಿದುಬಂದ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಡೆತ್‌ನೋಟ್ ಎನ್ನುವುದೇ ಇಲ್ಲ ಎಂದು ಹೇಳುತ್ತಾರೆ. ವಾಟ್ಸಪ್‌ನಲ್ಲಿ ಅವರು ಮಾಡಿದ್ದಾರೆ ಎಂದು ಮೊದಲು ಸಾಬೀತು ಆಗಬೇಕಲ್ಲ. ಡೆತ್‌ನೋಟ್ ಅಥವಾ ವಾಟ್ಸಪ್ ಡೆತ್‌ನೋಟ್ ಎಂದು ತಗೆದುಕೊಳ್ಳಬಹುದಾ ಎಂದು ಗೊಂದಲವಿದೆ. ಇದರಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡೋಕೆ ಅವಕಾಶ ಇಲ್ಲ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಅವರ ಮೇಲೆ ಕ್ರಮ ಆಗುತ್ತದೆ. ಹಾಗಾಗಿ ಸಂಪೂರ್ಣ ತನಿಖೆ ಮಾಡಿ ವರದಿ ಕೊಡಬೇಕು ಎಂದು ನಾನು ಸೂಚನೆ ಕೊಟ್ಟಿದ್ದೇನೆ ಎಂದು ಪರಮೇಶ್ವರ್ ಹೇಳಿದರು.
ಸೋಶಿಯಲ್ ಮೀಡಿಯಾವನ್ನು ಸಾಕ್ಷಿಯಾಗಿ ಗಣನೆಗೆ ತೆಗೆದುಕೊಳ್ಳಬಹುದು ಎಂದು ಕಾನೂನಿನಲ್ಲಿ ಇದ್ದರೆ ಅದನ್ನ ಕನ್ಸಿಡರ್ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.