ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿರುವುದು ನಿಜಕ್ಕೂ ಅತ್ಯಂತ ಸಂತಸದ ವಿಷಯ.
ಆದರೆ ರಾಷ್ಟ್ರಪತಿಗಳು ಬರುತ್ತಾರೆಂದು ಬಡ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಜಿಲ್ಲಾಡಳಿತ ಮತ್ತು ನಗರ ಪಾಲಿಕೆ ಕಷ್ಟ ಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ?
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬರುವುದು ಸೆಪ್ಟೆಂಬರ್ 1 ಕ್ಕೆ. ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಸಿದ್ದಾರ್ಥ ನಗರದ ಫುಡ್ ಸ್ಟ್ರೀಟ್ ವ್ಯಾಪಾರಿಗಳಿಗೆ ಮೂರು ದಿನ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ದರು. ಹಾಗಾಗಿ ಭಾನುವಾರದಿಂದ ಮಂಗಳವಾರದವರೆಗೂ ಎಲ್ಲಾ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಬೇಕಾಗಿತ್ತು.
ಈ ಸಣ್ಣ ಪುಟ್ಟ ವ್ಯಾಪಾರಿಗಳು ನಾಳೆಯಿಂದ ಅಂಗಡಿ ಮುಚ್ಚಲು ನಿರ್ಧರಿಸಿದ್ದರು. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ಶನಿವಾರ ಅಂಗಡಿಗಳವರಿಗೆ ಶಾಕ್ ಮೇಲೆ ಶಾಕ್ ನೀಡಿದ್ದಾರೆ.

ಬೆಳಿಗ್ಗೆ ಪಾಲಿಕೆ ಅಧಿಕಾರಿಗಳು ಏಕಾಏಕಿ ಫುಡ್ ಸ್ಟ್ರೀಟ್ ನ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.ಅಂದರೆ ಇಡೀ ಅಂಗಡಿ ಮುಂಗಟ್ಟನೇ ಕಿತ್ತು ಬಿಸಾಡಿದ್ದಾರೆ.
ಅಂಗಡಿಗಳವರು ತಮ್ಮ ಹೊಟ್ಟೆಪಾಡಿಗಾಗಿ ಹೊಟ್ಟೆ ಬಟ್ಟೆ ಕಟ್ಟಿ ಎಲ್ಲೋ ಒಂದಷ್ಟು ಸಾಲ ಸೋಲ ಮಾಡಿ ಸಣ್ಣಪುಟ್ಟ ಪೆಟ್ಟಿಗೆ ಅಂಗಡಿಯೋ ಅಥವಾ ಗಾಡಿಗಳ ಮೇಲೆ ಚುರುಮುರಿ, ಟೀ, ಕಾಫಿ, ಬಿಸ್ಕೆಟ್ ಮತ್ತಿತರ ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದರು.
ಆದರೆ ಯಾವುದೇ ಮುನ್ಸೂಚನೆ ನೀಡದೆಯೇ ಅಧಿಕಾರಿಗಳು ಇಂದು ದಿಢೀರನೆ ಎಲ್ಲ ಅಂಗಡಿಗಳನ್ನು ಜೆಸಿಬಿ ಮೂಲಕ ಕಿತ್ತು ಬಿಸಡಿರುವುದು ನಿಜಕ್ಕೂ ಹೇಯ ಕೃತ್ಯವಾಗಿದೆ.
ಸಣ್ಣಪುಟ್ಟ ಅಂಗಡಿಗಳು ಎಂದರೂ ಲಕ್ಷಾಂತರ ರೂ ವೆಚ್ಚವಾಗಿರುತ್ತದೆ, ಅವರು ಮತ್ತೆ ಆ ಹಣವನ್ನು ಎಲ್ಲಿ ಹೊಂದಿಸಿ ತರಬೇಕು? ಪಾಲಿಕೆ ಮತ್ತು ಜಿಲ್ಲಾಡಳಿತ ದವರಿಗೆ ನಿಜಕ್ಕೂ ಮಾನವೀಯತೆ ಇದ್ದರೆ ಅಂಗಡಿಗಳವರಿಗೆ ಕೊನೆಯ ಪಕ್ಷ ಅಂಗಡಿ ಕಟ್ಟಿಕೊಳ್ಳಲು ಧನ ಸಹಾಯ ಮಾಡುವ ಅತ್ಯಗತ್ಯವಿದೆ ಮತ್ತು ಜಾಗ ಕೂಡ ನೀಡಬೇಕಾಗಿದೆ.