ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ಮಾಡಿದ ಪೌರಕಾರ್ಮಿಕರು

Spread the love

ಮೈಸೂರು: ಮೈಸೂರು ನಗರರದ ಅಗ್ರಹಾರದಲ್ಲಿರುವ ಶೃಂಗೇರಿ ಶಂಕರಮಠದಲ್ಲಿ ಆಷಾಢಮಾಸದ ಪ್ರಯುಕ್ತ 150ಕ್ಕೂ ಹೆಚ್ಚು ಪೌರಕಾರ್ಮಿಕರು ಲಲಿತ ಸಹಸ್ರನಾಮ ಪಾರಾಯಣ ಮಾಡಿದರು.

ನಗರಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ. ಲಕ್ಷ್ಮಿದೇವಿ ನೇತೃತ್ವದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪೌರಕಾರ್ಮಿಕರಿಂದ ಲಲಿತ ಸಹಸ್ರನಾಮ ಪಾರಾಯಣದಲ್ಲಿ ಬನ್ನಾರಿಯಮ್ಮ ತಂಡ ಚಾಮುಂಡಿಪುರಂ ಬಡಾವಣೆ, ದೇವಸೇನಾ ತಂಡ ವಿಶ್ವೇಶ್ವರನಗರ, ದುರ್ಗಾದೇವಿ ತಂಡ ಸಿಲ್ಕ್ ಫ್ಯಾಕ್ಟರಿ ವೃತ್ತ, ರೇಣುಕಾದೇವಿ ತಂಡ ಅಕ್ಕನಬಳಗ, ಕಾಮಾಕ್ಷಿ ದೇವಿ ತಂಡ ವಸ್ತುಪ್ರದರ್ಶನ ಆವರಣ, ಶಾರದಾದೇವಿ ತಂಡ ಶಂಕರಮಠ, ಕರುಮಾರಿಯಮ್ಮ ತಂಡ ಕನಕಗಿರಿ, ಮೀನಾಕ್ಷಿದೇವಿ ತಂಡ ಗಾಡಿ ಚೌಕ ತಂಡ ಸೇರಿದಂತೆ ವಿವಿಧ ತಂಡಗಳನ್ನ ರಚಿಸಿ ಕಳೆದ 20 ದಿನಗಳಿಂದ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಲಲಿತಸಹಸ್ರನಾಮ ಹೇಳಿಕೊಟ್ಟು ಅಭ್ಯಾಸ ಮಾಡಿಸಿ ಶಂಕರಮಠದಲ್ಲಿ ಸಾಮೂಹಿಕವಾಗಿ ಲಲಿತ ಸಹಸ್ರನಾಮ ಕುಂಕುಮಾರ್ಚನೆ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ‌ ಶಾಸಕ
ಟಿ ಎಸ್ ಶ್ರೀವತ್ಸ ಮಾತನಾಡಿ ಶ್ಲೋಕಗಳು,ಪಾರಾಯಣಗಳನ್ನ ಕಲಿಯಲು ಯಾವುದೇ ಜಾತಿಯ ಸಂಕೋಲೆ ಇಲ್ಲ ಎಂದು ತಿಳಿಸಿದರು.

ಪೌರ ಕಾರ್ಮಿಕರು ಲಲಿತಾ ಸಹಸ್ರನಾಮ ಕಲಿತು ಪಾರಾಯಣ ಮಾಡುತ್ತಿರುವುದು‌ ಅತ್ಯಂತ‌ ಸಂತೋಷದ ವಿಷಯ ಎಂದು ಹೇಳಿದರು. ಅವರು ಸಮಯ ಹೊಂದಿಸಿಕೊಂಡು ಲಲಿತಾ ಸಹಸ್ರನಾಮ ಕಲಿತಿದ್ದಾರೆ ಎಂದು ಶ್ಲಾಘಿಸಿದರು.

ಹಾಗೂ ಲಲಿತ ಸಹಸ್ರನಾಮ ಕಲಿಸಿದವರು,ಆಯೋಜಕರು ಎಲ್ಲರಿಗೂ ಶಾಸಕರು ಅಭಿನಂದನೆ ಸಲ್ಲಿಸಿದರು.

ಕಳೆದ ಏಳೆಂಟು ವರ್ಷಗಳ ಹಿಂದೆ‌ ಪೌರ ಕಾರ್ಮಿಕರ ಕಾಲೋನಿಯಲ್ಲಿ ಮತಾಂತರ ನಡೆಯುತ್ತಿತ್ತು.ಮತಾಂತರ ಮಾಡುವವರು ಕಡುಬಡವರು,ಪೌರ ಕಾರ್ಮಿಕರು ವಾಸಿಸುವ ಕಾಲೋನಿಗಳನ್ನೇ ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿದ್ದರು.

ನಂತರ ಆರ್ ಎಸ್ ಎಸ್ ನ‌ ಹಲವಾರು ಮಂದಿ ಎಚ್ಚೆತ್ತುಕೊಂಡು ಮತಾಂತರ ಮಾಡುವವರಿಂದ ಜನರನ್ನು ಉಳಿಸಿದರು.ಮತಾಂತರ ಆಗುವವರಿಗೆ ತಿಳಿಹೇಳಿದರೆಂದು‌ ಶ್ರೀವತ್ಸ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮಿ ದೇವಿ , ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯ ಮೂರ್ತಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್,
ಕಲ್ಪನಾ ರಾಮಚಂದ್ರ,ಮಠದ ವ್ಯವಸ್ಥಾಪಕರಾದ ಶೇಷಾದ್ರಿ,ಹರೀಶ್, ಎಂ ಆರ್ ಬಾಲಕೃಷ್ಣ,ಅಜಯ್ ಶಾಸ್ತ್ರಿ, ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ಪೌರಕಾರ್ಮಿಕರಿಗೆ ಬಾಗಿನ ನೀಡಲಾಯಿತು.