ಮೈಸೂರು: ವಿವಾಹವಾಗುವುದಾಗಿ ನಂಬಿಸಿ ಯುವತಿ ಜತೆ ತೆಗೆಸಿಕೊಂಡಿದ್ದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಕಿರುಕುಳ ನೀಡಿದ ಆರೋಪದ ಮೇಲೆ
ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ನಗರದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ತುಮಕೂರು ಮೂಲದ ಸದಾನಂದಗೌಡ, ಅವರ ಅಕ್ಕ ರಾಜಮ್ಮ, ಭಾವ ಹನುಮಂತಪ್ಪ ಹಾಗೂ ದಯಾನಂದ್ ಎಂಬುವರ ವಿರುದ್ದ ದೂರು ದಾಖಲಾಗಿದೆ.
ಕಳೆದ 9 ವರ್ಷಗಳ ಹಿಂದೆ ಯುವತಿಗೆ ಸದಾನಂದ್ ಎಂಬವರ ಪರಿಚಯವಾಗಿದೆ.ನಂತರ ಸ್ನೇಹ ಪ್ರೀತಿಗೆ ತಿರುಗಿದೆ.ಆತ ಮದುವೆ ಪ್ರಸ್ತಾಪ ಮಾಡಿದ್ದಾನೆ.
ಈ ನಡುವೆ ಬೈಕ್ ಕೊಡಿಸುವ ನೆಪದಲ್ಲಿ ಸದಾನಂದ್ ಯುವತಿಯಿಂದ ಚೆಕ್‌ಗಳನ್ನ ಪಡೆದಿದ್ದಾನೆ. ಆಕೆ ಬೈಕ್ ಹಣ ಹಿಂದಿರುಗಿಸಿದರೂ ಚೆಕ್‌ಗಳನ್ನ ಹಿಂದಿರುಗಿಸಿಲ್ಲ. ನಂತರ ಮದುವೆ ಆಗುವುದಾಗಿ ನಂಬಿಸಿದ್ದಾನೆ. ಇಬ್ಬರೂ ಹಲವಾರು ಸ್ಥಳಗಳಲ್ಲಿ ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ. ಎರಡು ವರ್ಷಗಳ ನಂತರ ಜಾತಿ ನೆಪ ಒಡ್ಡಿ ಮದುವೆ ಆತ ನಿರಾಕರಿಸಿದ್ದಾನೆ.
ಇದರಿಂದಾಗಿ ಯುವತಿ ಅಂತರ ಕಾಯ್ದುಕೊಂಡಿದ್ದಾಳೆ. ಕೆಲಕಾಲ ಸುಮ್ಮನಿದ್ದ ಸದಾನಂದ್ ಮತ್ತೆ ಸಂಪರ್ಕಕ್ಕೆ ಬಂದು ಮನೆಯಿಂದ ಆಕೆ ನೀಡಿದ್ದ ಚೆಕ್‌ಗಳನ್ನು ಸ್ನೇಹಿತನ ಹೆಸರಲ್ಲಿ 8.50 ಲಕ್ಷ ರೂ. ಹಣ ಬರೆದು ಬ್ಯಾಂಕ್ ಗೆ ನೀಡುವ ಮೂಲಕ ಚೆಕ್ ಬೌನ್ಸ್ ಮಾಡಿಸಿದ್ದಾನೆ.ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ.
ನಂತರ ಆತ ಮನೆಗೆ ಬಂದು ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದನೆಂದು ನೊಂದ ಯುವತಿ ಆರೋಪಿಸಿದ್ದಾರೆ.
ಬೇರೊಬ್ಬನ ಜೊತೆ ವಿವಾಹ ನಿಶ್ಚಯವಾದಾಗ ಹುಡುಗನ ಮನೆಯವರಿಗೆ ಫೋಟೋಗಳನ್ನ ತೋರಿಸಿ ಮದುವೆ ನಿಲ್ಲಿಸಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹರಿದುಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.
ಹಾಗಾಗಿ ಸದಾನಂದಗೌಡ ಹಾಗೂ ಈತನಿಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ದ ನೊಂದ ಯುವತಿ ದೂರು ದಾಖಲಿಸಿದ್ದಾರೆ.