ಬೆಂಗಳೂರು: ಕರ್ನಾಟಕ ರಾಜ್ಯ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ಬೆಂಗಳೂರಿನ ಶಿವಾಜಿನಗರದ ಐತಿಹಾಸಿಕ ಬೆಸಿಲಿಕಾ ಚರ್ಚ್ ನಲ್ಲಿ ನಡೆದ ಸೇಂಟ್ ಮೇರಿ ಅಮ್ಮನವರ ಹುಟ್ಟು ಹಬ್ಬದ ಆಚರಣೆಗೆ ಚಾಲನೆ ನೀಡಿ ಸಿಎಂ ಮಾತನಾಡಿದರು.
ಕಪಟಿಗಳ ದ್ವೇಷದ ಪಿತೂರಿಗೆ ಮಹನೀಯರ ಮಾನವೀಯ ಆಶಯಗಳು ಬಲಿಯಾಗಬಾರದು, ಪರಸ್ಪರ ಸಹಬಾಳ್ವೆ, ಸೌಹಾರ್ದದ ಬೆಸುಗೆಯನ್ನು ನಾವೆಲ್ಲರೂ ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಶಿವಾಜಿನಗರದ ಬೆಸಿಲಿಕಾ ಮಂದಿರ ಚಾರಿತ್ರಿಕವಾಗಿ ಸೌಹಾರ್ದ ಮಂದಿರವಾಗಿದೆ. ಎಲ್ಲಾ ಜಾತಿ, ಧರ್ಮದವರು ಈ ಪ್ರಾರ್ಥನಾ ಮಂದಿರಕ್ಕೆ ನಿರಂತರವಾಗಿ ಬಂದು ಹೋಗುತ್ತಿರುವುದೇ ಈ ಮಂದಿರದ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂದು ನುಡಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಧರ್ಮ ಗುರುಗಳ ಮತ್ತು ಸಂಸ್ಥೆಗಳ ಕೊಡುಗೆಯನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳುತ್ತಾರೆ, ಇವರ ಸಾಮಾಜಿಕ ಕಾರ್ಯ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಬೆಸಿಲಿಕಾ ಚರ್ಚ್ ಅಭಿವೃದ್ಧಿಗೆ ಐದು ಕೋಟಿ ನೆರವು ನೀಡುವುದಾಗಿ ಎಂದು ಸಿಎಂ ಭರವಸೆ ನೀಡಿದರು.
ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ರು. ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೊ ಅವರು ದಿವ್ಯ ಸಾನಿದ್ಯ ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತಿತರರು ಪಾಲ್ಗೊಂಡಿದ್ದರು.