ಕೊಳ್ಳೇಗಾಲದ ಸಿಲ್ಕಲ್ ಪುರ,ಕುಂತೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕೃಷ್ಣಮೂರ್ತಿ ಚಾಲನೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲ್ಲೂಕಿನ ಸಿಲ್ಕಲ್ ಪುರ ಹಾಗೂ ಕುಂತೂರು ಗ್ರಾಮಗಳಲ್ಲಿ ಸುಮಾರು 45 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಸಿಲ್ಕಲ್ ಪುರ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ 200 ಮೀಟರ್ ಸಿಸಿ ರಸ್ತೆ ಮತ್ತು 100 ಮೀಟರ್ ಚರಂಡಿ ಕಾಮಗಾರಿ ಹಾಗೂ ಕುಂತೂರು ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಮುಖ್ಯ ರಸ್ತೆಯಿಂದ ಗ್ರಾಮದೊಳಗೆ ಹಾದು ಹೋಗುವ ಮುಖ್ಯ ಚರಂಡಿ ಕಾಮಗಾರಿಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆಯಿಂದ ತಾಲ್ಲೂಕಿನ ಸಿಲ್ಕಲ್ ಪುರ ಹಾಗೂ ಕುಂತೂರು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 45 ಲಕ್ಷ ರೂ. ಗಳ ಅನುದಾನವನ್ನು ಸಚಿವರಾದ ಹೆಚ್. ಸಿ. ಮಹದೇವಪ್ಪ ಅವರು  ಮಂಜೂರು ಮಾಡಿದ್ದಾರೆ, ಅದರಲ್ಲಿ ಸಿಲ್ಕಲ್ ಪುರ ಗ್ರಾಮದ ಕಾಮಗಾರಿಗೆ 25 ಲಕ್ಷ ರೂ ಪೈಕಿ 8.25 ಲಕ್ಷ ರೂ, ಕುಂತೂರು ಗ್ರಾಮದ ಕಾಮಗಾರಿಗೆ 20 ಲಕ್ಷ ರೂ ಪೈಕಿ 10 ಲಕ್ಷ ರೂ. ಬಿಡುಗಡೆಯಾಗಿದೆ, ಈ ಅನುದಾನಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಗ್ರಾಮಸ್ಥರು ಗ್ರಾಮದಲ್ಲಿ 100 × 100 ಅಳತೆ ವಿಸ್ತೀರ್ಣವುಳ್ಳ ನಿವೇಶನವಿದ್ದು ಈ ನಿವೇಶನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಹೊಸ ಬಡಾವಣೆಯಲ್ಲಿರುವ ವಿದ್ಯುತ್ ಕಂಬಗಳನ್ನು ಸೆಸ್ಕ್ ನವರು ಅವೈಜ್ಞಾನಿಕವಾಗಿ ಅಳವಡಿಸಿದ್ದು ಸರಿಪಡಿಸಿ ಕೊಡುವಂತೆ ಕೋರಿದರು. ಇದೇ ವೇಳೆ ತೀರ ಹಳೆಯ ಮನೆಯಲ್ಲಿ ಇರುವವರಿಗೆ ಬೇರೆ ಮನೆ ನಿರ್ಮಿಸಿ ಕೊಡುವಂತೆ ಕೇಳಿಕೊಂಡರು.

ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿದ ಶಾಸಕರು ಇಷ್ಟು ವಿಶಾಲವಾದ ನಿವೇಶನ ಯಾವ ಗ್ರಾಮದಲ್ಲಿಯು ಇಲ್ಲ. ಈ ಗ್ರಾಮದಲ್ಲಿ ಉತ್ತಮವಾದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲು ಸ್ಥಳ ವಿಶಾಲವಾಗಿದೆ, ಸಮುದಾಯ ಭವನ ನಿರ್ಮಾಣಕ್ಕೆ ನನ್ನ  ಶಕ್ತಿ ಮೀರಿ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಹಳೆಯ ಮಣ್ಣಿನ ಮನೆಗಳನ್ನು ಕೂಡಲೇ ಜಿ.ಪಿ.ಎಸ್ ಮಾಡಿ ಅಪ್ಲೋಡ್ ಮಾಡುವಂತೆ ಗ್ರಾಪಂ ಪಿಡಿಒ ಮಲ್ಲೇಶ್ ಅವರಿಗೆ ಸೂಚಿಸಿದರು. ಸೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಅಗತ್ಯ ಇರುವ ಕಡೆ ಅಳವಡಿಸುವಂತೆ ಆದೇಶಿಸಿದರು‌

ಕುಂತೂರು ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಮುಖ್ಯ ರಸ್ತೆಯಿಂದ ಗ್ರಾಮದೊಳಗೆ ಹಾದು ಹೋಗುವ ಮುಖ್ಯ ಚರಂಡಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ಪರಿಶಿಷ್ಟ ಜಾತಿ ಬೀದಿಯಲ್ಲಿ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ ಆದ್ದರಿಂದ ಈ ಕಾಮಗಾರಿಯನ್ನು 20 ಲಕ್ಷ ರೂ ವೆಚ್ಚದಲ್ಲಿ ಕೈಗೊಳ್ಳಲು ಚಾಲನೆ ನೀಡಲಾಗಿದೆ, ಈ ಅನುದಾನಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಹೆಚ್ಚಿನ ಅನುದಾನಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ಗೊಬ್ಬಳಿಪುರ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಬೇಕಾಗಿದ್ದ ಕಾರ್ಯಕ್ರಮವನ್ನು ಗೊಂದಲದಿಂದ ಮುಂದೂಡಲಾಗಿದೆ ಎಂದು ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಗ್ರಾಪಂ ಅಧ್ಯಕ್ಷ ಮಹಾದೇವಸ್ವಾಮಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುಂತೂರು ರಾಜೇಂದ್ರ, ಪಿಡಿಒ ಮಲ್ಲೇಶ್, ಕೆ ಆರ್ ಐ ಡಿ ಎಲ್ ಕಾರ್ಯಾಪಾಲಕ ಅಭಿಯಂತರ ಚಿಕ್ಕಲಿಂಗಯ್ಯ, ತಾ.ಪಂ. ಮಾಜಿ ಸದಸ್ಯ ಚೆಲುವರಾಜು, ಕುಂತೂರು ಗ್ರಾಪಂ ಅಧ್ಯಕ್ಷೆ ಗಂಗಾಂಬಿಕೆ ಮಾಜಿ ಅಧ್ಯಕ್ಷರಾದ ಬಸವರಾಜು, ಲಿಂಗರಾಜು, ಸದಸ್ಯರುಗಳಾದ ರೂಪ ಸಿ ಮಲ್ಲಯ್ಯ, ಗುತ್ತಿಗೆದಾರ ಹರೀಶ್ ಗ್ರಾಮದ ಮುಖಂಡರುಗಳಾದ ಮಲ್ಲಣ್ಣ, ರಾಜೇಂದ್ರ, ಸಿದ್ದರಾಜು, ನಂಜುಂಡಸ್ವಾಮಿ ಪುಟ್ಟಮಲ್ಲಯ್ಯ ಮತ್ತಿತರ ಅನೇಕರು ಹಾಜರಿದ್ದರು.