(ವರದಿ:ಸುದ್ದರಾಜು ಕೊಳ್ಳೇಗಾಲ)
ಕೊಳ್ಳೇಗಾಲ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಹಾಗೂ ನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಾಲ್ವರು ನೌಕರರಿಗೆ ಕೊಳ್ಳೇಗಾಲ ಘಟಕದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಚಾಲಕರಾಗಿ ಸೇವೆ ಸಲ್ಲಿಸಿರುವ ಸೈಯದ್ ಜಬಿವುಲ್ಲಾ, ಸಯ್ಯದ್ ಅನ್ವರ್, ಚಿನ್ನದ ಪದಕವನ್ನು ಪಡೆದ ಚಾಲಕ ವಿ ಗೋವಿಂದಯ್ಯ ಹಾಗೂ ನಿರ್ವಾಹಕರಾಗಿ ಸೇವೆ ಸಲ್ಲಿಸಿರುವ ಆರ್.ಕುಮಾರಸ್ವಾಮಿ ಅವರು ಸೇವೆಯಿಂದ ವಯೋ ನಿವೃತ್ತಿ ಹೊಂದಿರುವುದರಿಂದ ಈ ನಾಲ್ವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಕೊಳ್ಳೇಗಾಲ ಘಟಕದಲ್ಲಿ 2024- 25 ನೇ ಸಾಲಿನಲ್ಲಿ ನಿವೃತ್ತಿ ಹೊಂದಿರುವ ನೌಕರರಿಗೆ ನೌಕರರು ಹಾಗೂ ಆಡಳಿತ ವಿಭಾಗದ ಪರವಾಗಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಘಟಕ ವ್ಯವಸ್ಥಾಪಕರಾದ ಭೋಗ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಸ್ಥೆ ಪರವಾಗಿ ಹಾಗೂ ನೌಕರರ ಪರವಾಗಿ ಘಟಕ ವ್ಯವಸ್ಥಾಪಕರು ನಿವೃತ್ತಿ ಹೊಂದಿದ ನೌಕರರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿ ಬೀಳ್ಕೊಟ್ಟರು.
ಈ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಾಹಕ ಡಿ.ರಂಗಸ್ವಾಮಿ ಅವರು ನೆರವೇರಿಸಿದರು.