ಮೈಸೂರು: ಭಾರತ ರಾಮಾಯಣ, ಮಹಾಭಾರತದಂತಹ ವಿಶಿಷ್ಟ ಕಥೆಗಳನ್ನು ನೀಡುವ ಮೂಲಕ ಜಗತ್ತಿನಲ್ಲೇ ಕಥೆಗಳ ಆಗರವೆನಿಸಿದೆ ಎಂದು ಕೇಂದ್ರ ಸಚಿವ ಡಾ.ಎಲ್.ಮುರುಗನ್ ಬಣ್ಣಿಸಿದರು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎರಡು ದಿನಗಳ ಕಾಲ ನಡೆದ ಮೂರನೇ ‘ಪರಿದೃಶ್ಯ’ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮುರುಗನ್ ಮಾತನಾಡಿದರು.

ಕಥಾ ನಿರೂಪಣೆ ಒಂದು ಜಾಗತಿಕ ಕಲೆಯಾಗಿದೆ, ಭಾರತದಲ್ಲಿ ನಿರ್ಮಾಣವಾದ ಸಿನೆಮಾಗಳು ಈಗ ಕೇವಲ ರಾಜ್ಯಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿವೆ ಎಂದು ಹೇಳಿದರು.
ಭಾರತವನ್ನು ಜಾಗತಿಕ ಮಟ್ಟದ ಸೃಜನಾತ್ಮಕ ಆರ್ಥಿಕತೆಯಾಗಿ ಮಾಡಲು ಆಡಿಯೋ ವಿಶ್ಯುವಲ್ ಎಂಟರ್ ಟೈನ್ಮೆಂಟ್ ಸಮ್ಮಿಟ್ ಅನ್ನು 2019 ರಲ್ಲಿ ಘೋಷಣೆ ಮಾಡಲಾಗಿತ್ತು, ಈ ವರ್ಷ ಅದು ನಡೆಯಲಿದೆ. ಎಲ್ಲಾ ರೀತಿಯ ಮಾಧ್ಯಮಗಳಿಗೂ ಇದು ಪೂರಕವಾದದ್ದು ಎಂದು ತಿಳಿಸಿದರು.
ಪಾರಂಪರಿಕ ಮಾಧ್ಯಮ, ಟಿವಿ ಮಾಧ್ಯಮ, ಗೇಮಿಂಗ್, ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಿದೆ. ಯಂಗ್ ಫಿಲ್ಮ್ ಮೇಕರ್ಸ್ ಚಾಲೆಂಜ್ ಎಂಬುದು ಕೂಡ ಇದರ ಒಂದು ಭಾಗ. ಇದರ ಅಡಿಯಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ 100 ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸ್ತುತ ಹಾಲಿವುಡ್ ಸಿನೆಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮಾಡಲು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ನಮ್ಮ ದಕ್ಷಿಣ ಭಾರತದ ಸಿನೆಮಾಗಳಾದ ಆರ್ ಆರ್ ಆರ್, ಕಾಂತಾರ, ಬಾಹುಬಲಿ, ಪುಷ್ಪದಂತಹ ಸಿನೆಮಾಗಳು ನಮ್ಮ ತನದ ಕಥೆಗಳನ್ನು ಹೇಳುವ ಮೂಲಕ ವಿಶ್ವದಾದ್ಯಂತ ಮನ್ನಣೆ ಪಡೆದಿದೆ. ಸಿನೆಮಾಗಳಿಗೆ ಬೇಕಾದ ಅನುದಾನವನ್ನು ಕೇಂದ್ರದಿಂದ ನೀಡಲಾಗುತ್ತಿದೆ ಎಂದು ಡಾ.ಮುರುಗನ್ ತಿಳಿಸಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ ಸುನೀಲ್ ಪುರಾಣಿಕ್ ಪರಿದೃಶ್ಯದಲ್ಲಿ ಉತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದ ಚಿತ್ರ ಇಂದು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ. ಸಾಕ್ಷ್ಯಚಿತ್ರ, ಕಿರುಚಿತ್ರದ ಮೂಲಕ, ಸಿನೆಮಾ ಕ್ಷೇತ್ರಕ್ಕೆ ಬರಬೇಕೆನ್ನುವ ಪ್ರತಿಭೆಗಳಿಗೆ ಪರಿದೃಶ್ಯ ಉತ್ತಮ ವೇದಿಕೆ. ಬೆಂಗಳೂರಲ್ಲಿ ಪ್ರಾರಂಭವಾದ ಪರಿದೃಶ್ಯ ಮುಂದಿನ ದಿನಗಳಲ್ಲಿ ಸಿನೆಮಾ ಕ್ಷೇತ್ರದ ಹಬ್ ಆಗಲಿರುವ ಮೈಸೂರಿಗೆ ರವಾನೆಯಾಗಿದ್ದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಜಗನ್ನಾಥ ಶೆಣೈ, ಮೈಸೂರು ಸಿನೆಮಾ ಸೊಸೈಟಿಯ ಅಧ್ಯಕ್ಷ ಡಾ. ಚಂದ್ರಶೇಖರ ಸಿ ಆರ್, ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್ ಉಪಸ್ಥಿತರಿದ್ದರು.