ಮೈಸೂರು,ಮಾ.5: ರಾಜ್ಯ ಸರ್ಕಾರ ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯ ನಿಯಮವನ್ನು ತಿದ್ದುಪಡಿ ಮಾಡಲು ಹೊರಟಿರುವುದನ್ನು ವಿರೋಧಿಸಿ
ಕರ್ನಾಟಕ ಸೇನಾ ಪಡೆ ಪ್ರತಿಭಟನೆ ನಡೆಸಿತು.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ,ರಾಜ್ಯಪಾಲರು,ಕೃಷಿ ಮಾತುಕಟ್ಟೆ ಸಚಿವರು,ಮುಖ್ಯ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ರವಾನಿಸಲಾಯಿತು.

ಈ ವೇಳೆ ತೇಜೇಶ್ ಲೋಕೇಶ್ ಗೌಡ ಮಾತನಾಡಿ, 1965-66ರ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯ ನಿಯಮವನ್ನು ಪ್ರಸ್ತುತ ಅಧಿವೇಶನದಲ್ಲಿ ತರಾತುರಿಯಲ್ಲಿ ತಿದ್ದುಪಡಿ ಮಾಡಲು ಹೊರಟಿರುವುದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ರೈತರಿಗೆ ಹಾಗೂ ಸಗಟು ಮಾರಾಟಗಾರರಿಗೆ ಅನುಕೂಲವಾಗಿರುವ ಪ್ರಸ್ತುತ ಚಾಲ್ತಿಯಲ್ಲಿರುವ ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಬಾರದೆಂದು ಒತ್ತಾಯಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇರುವುದು ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಲಿ ಹಾಗೂ ಸಗಟು ಅಂದರೆ ಹೋಲ್ ಸೇಲ್ ಮಾರಾಟಗಾರರಿಗೆ, ಅದರಲ್ಲೂ ವಿಶೇಷವಾಗಿ, ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ತಂದು ಇಲ್ಲಿ ಸಗಟು ಮಾರಾಟ ಮಾಡಲು.ಆದರೆ ಇಲ್ಲಿ ತಂಬಾಕು ಉತ್ಪನ್ನ ಗಳು, ಕೊಕೊಕೋಲಾ ಮತ್ತಿತರ ಕೂಲ್ ಡ್ರಿಂಕ್ಸ್ ಮಾರಾಟ ಮಾಡಲಾಗುತ್ತಿದೆ.ಇದರಿಂದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ದೂರಿದರು.
ಆದರೆ ಈಗ ನಿವೇಶನ ಪಡೆದ ವ್ಯಾಪಾರಿಗಳು ಎಪಿಎಂಸಿ ಇಲಾಖೆಯ ನಕ್ಷೆ ,ಪ್ಲಾನ್, ಕಾಯ್ದೆ, ನಿಯಮದ ಆಶೋತ್ತರಗಳಿಗೆ ವಿರುದ್ಧವಾಗಿ, ನಿವೇಶನವನ್ನು ಹಲವಾರು ಭಾಗಗಳನ್ನಾಗಿ ವಿಂಗಡಿಸಿ, ಮಳಿಗೆಗಳನ್ನು ನಿರ್ಮಿಸಿ ಅಧಿಸೂಚಿತವಲ್ಲದ ವ್ಯಾಪಾರ ವಹಿವಾಟು ನಡೆಸಲು, ಕಾನೂನು ಬಾಹಿರವಾಗಿ ಬಾಡಿಗೆಗೆ ನೀಡಿರುವುದು ಕಂಡುಬಂದಿದೆ ಎಂದು ಹೇಳಿದರು.
ಎಪಿಎಂಸಿ ಲೈಸೆನ್ಸ್ ಹೊಂದಿರುವ ವ್ಯಾಪಾರಿಯು ಸತತವಾಗಿ ಮೂರು ವರ್ಷ ಗಳು ವ್ಯಾಪಾರ, ವಹಿವಾಟು ನಡೆಸದೆ ಹಾಗೂ ಆರ್‌ಎಂಸಿ ಶುಲ್ಕ (ಸೆಸ್) ಪಾವತಿಸದೆ ಇದ್ದಲ್ಲಿ, ಎಪಿಎಂಸಿಯು ವ್ಯಾಪಾರಿಗೆ ನೀಡಿರುವ ಲೈಸೆನ್ಸ್ ರದ್ದುಪಡಿಸಿ ನಿವೇಶನದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಪೂರ್ಣ ಅಧಿಕಾರ ಹೊಂದಿದೆ ಎಂದು ಗುತ್ತಿಗೆಯ ಕರಾರು ಒಪ್ಪಂದ ಪತ್ರದಲ್ಲಿ ತಿಳಿಸಿರುತ್ತದೆ.
ಮೈಸೂರಿನ ಸ್ಥಳೀಯ ರೈತರ ಭೂಮಿಯನ್ನು ವಶಪಡಿಸಿಕೊಂಡು ಇಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆಯಾಗಿದೆ. ಈಗ ನೋಡಿದರೆ ಸ್ಥಳೀಯ ಸಗಟು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ನಿವೇಶನವನ್ನು ಮಂಜೂರು ಮಾಡದೆ, ಲಕ್ಷಾಂತರ ರೂ ಲಂಚ ನೀಡಿರುವ ಹಾಗೂ ಜ್ಯೇಷ್ಠತೆ ಹೊಂದಿಲ್ಲದವರಿಗೆ ಅಕ್ರಮವಾಗಿ, ಚಿಲ್ಲರೆ ದಿನಸಿ ವ್ಯಾಪಾರಿಗಳಿಗೆ, ತಂಬಾಕು ಉತ್ಪನ್ನ ವ್ಯಾಪಾರಿಗಳಿಗೆ, ಪ್ಲಾಸ್ಟಿಕ್ ವ್ಯಾಪಾರಿಗಳಿಗೆ, ಕಬ್ಬಿಣದ ವ್ಯಾಪಾರಿಗಳಿಗೆ, ತಂಪು ಪಾನೀಯ ವ್ಯಾಪಾರಿಗಳಿಗೆ ಹಾಗೂ ಇನ್ನಿತರ ಎಪಿಎಂಸಿ ಕಾಯ್ದೆಯ ವ್ಯಾಪ್ತಿಗೆ ಒಳಪಡದ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ತೇಜೇಶ್ ದೂರಿದರು.
ರಾಜ್ಯ ಸರ್ಕಾರ ಈ ಅಕ್ರಮಗಳನ್ನು ಮುಚ್ಚಿ ಹಾಕಲು ಎಪಿಎಂಸಿಯಲ್ಲಿ ಈಗ ಚಿಲ್ಲರೆ ವ್ಯಾಪಾರಿಗಳಿಗೂ ವ್ಯಾಪಾರ ಮಾಡಲು ಅವಕಾಶ ಕುರಿತು ಕಾಯ್ದೆಯನ್ನೇ ತಿದ್ದುಪಡಿ ಮಾಡಲು ಹೊರಟಿದೆ.ಹಾಗೊಂದು ವೇಳೆ ತಿದ್ದುಪಡಿ ಮಾಡಿದರೆ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ದಯಾನಂದ್ ಎಂ ವಿ, ರಾಜ್ಯ ರೈತಸಂಘದ ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ ಶಿವರಾಂ ಗೌಡ, ನಾಗರಾಜು, ಕೃಷ್ಣಪ್ಪ, ರವೀಶ್ ಮತ್ತಿತರರು ಪಾಲ್ಗೊಂಡಿದ್ದರು.