ಕೆಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಟ್ಟೇ ಇಡುತ್ತೇವೆ:ಹರೀಶ್ ಗೌಡ

ಮೈಸೂರು: ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ಇಟ್ಟೇ ಇಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಹರೀಶ್ ಗೌಡ,ಸಿಎಂ ಸಿದ್ದರಾಮಯ್ಯ ಅವರು ಸುಮ್ಮನೆ ವಿವಾದ ಸೃಷ್ಟಿಸೋದು ಬೇಡ ಅಂತ ಅದನ್ನ ಬಿಟ್ಟು ಬಿಡಿ ಅಂತ ಹೇಳಿದ್ದಾರೆ. ಆದರೂ ನಾನು ಸಂಸದ ಯದುವೀರ್ ಒಡೆಯರ್ ಅವರಿಗೂ ಕೂಡ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಎಲ್ಲರಿಗೂ ಮನವರಿಕೆ ಮಾಡಿ ಆ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ಪ್ರಯತ್ನ ಮಾಡುತ್ತೇವೆ. ಈ ರಸ್ತೆಗೆ ಪ್ರಿನ್ಸೆಸ್ ರಸ್ತೆ ಅಂತ ಹೆಸರಿರೋದು ದಾಸಪ್ಪ ಸರ್ಕಲ್ ನಿಂದ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದವರಗೆ ಮಾತ್ರ. ಅಲ್ಲಿಂದ ಮುಂದಕ್ಕೆ ಯಾವುದೇ ಹೆಸರು ಇಲ್ಲ. ಅಲ್ಲಿಂದ ಮುಂದಕ್ಕಾದರೂ ಸಿದ್ದರಾಮಯ್ಯ ಅವರ ಹೆಸರಿಡುತ್ತೇವೆ. ಅವರ ಹೆಸರ ಇಡದೆ ಬೇರೆ ಯಾರು ಹೆಸರು ಇಡಬೇಕು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಮೈಸೂರಿಗೆ ಕೊಟ್ಟಿರುವ ಕೊಡುಗೆ ಏನು ಅಂತ ಎಲ್ಲರಿಗೂ ಗೊತ್ತು. ಆ ರಸ್ತೆಯಲ್ಲಿ ತಲೆ ಎತ್ತಿರುವ ಜಯದೇವ, ಜಿಲ್ಲಾಸ್ಪತ್ರೆ, ಇಎಸ್ಐ ಆಸ್ಪತ್ರೆ ರಿನೋವೇಷನ್, ಸ್ಯಾನಿಟೋರಿಯಮ್ ಆಸ್ಪತ್ರೆ ಸೇರಿದಂತೆ ಹಲವಾರು ಆಸ್ಪತ್ರೆಗಳ ಅಭಿವೃದ್ಧಿ ಮಾಡಿದ್ದಾರೆ. ಮೈಸೂರಿಗೆ ಹಲವಾರು ಯೋಜನೆಗಳನ್ನು ಕೊಟ್ಟಿದ್ದಾರೆ.

ಮೈಸೂರು ಮಹಾರಾಜರ ನಂತರ ಮೈಸೂರಿನ ಅಭಿವೃದ್ಧಿಗೆ ಅಪಾರ ಪಾತ್ರ ಇರೋದು ಸಿದ್ದರಾಮಯ್ಯ ಅವರದ್ದು. ನಂಜನಗೂಡು ಆರ್.ಎಂ.ಸಿ ಜಂಕ್ಷನ್ ಗೂ ಸಿದ್ದರಾಮಯ್ಯ ಅವರ ಹೆಸರು ಇಟ್ಟರೂ ಕೆ.ಆರ್.ಎಸ್ ರಸ್ತೆ ಮಾರ್ಗಕ್ಕೂ ಕೂಡ ಹೆಸರಿಡುತ್ತೇವೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಹರೀಶ್ ಗೌಡ ಹೇಳಿದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಹರೀಶ್ ಗೌಡ, ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಆಗಿರಬೇಕು. ಜೊತೆಗೆ ಮುಂದಿನ ಬಾರಿಯೂ ಅವರೇ ಮುಖ್ಯಮಂತ್ರಿ ಆಗಿರಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿ ಅವರನ್ನು ಮೀರಿಸುವವರಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮಗೆ ಪೂರಕವಾದ ಫಲಿತಾಂಶ ಬರಬೇಕಾದರೆ ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗಿರಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಇರಬೇಕು ಎಂದು ಹೇಳಿದರು.