ಮಂಡ್ಯ: ಕಾವೇರಿ ಜಲಾನಯನ ಪ್ರದೇಶಕ್ಕೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಪ್ರತಿ ಕ್ಷೇತ್ರವನ್ನೂ ಗಮದಲ್ಲಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ, ಮಂಡ್ಯ ಜಿಲ್ಲೆ ಒಂದಕ್ಕೆ 1 ಸಾವಿರ ಕೋಟಿಗೂ ಹೆಚ್ಚು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
92 ವರ್ಷಗಳ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಭರ್ತಿಯಾಗಿರುವ ಕೆಆರ್ ಎಸ್ ಅಣೆಕಟ್ಟಿಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಬಾಗಿನ ಅರ್ಪಿಸಿ ನಂತರ ಅವರು ಮಾತನಾಡಿದರು.
ನಮ್ಮ ಸರ್ಕಾರ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶವನ್ನು ಹೆಚ್ಚು ಮಾಡಿದೆ. 80 ವರ್ಷಗಳ ಹಳೆಯ ಕಾಲುವೆಗಳನ್ನು ದುರಸ್ತಿಗೊಳಿಸಲಾಗಿದೆ. ತಮಿಳುನಾಡಿಗೆ 9 ಟಿಎಂಸಿ ನೀರು ಹೋಗಬೇಕಿತ್ತು ಹೆಚ್ಚು ಮಳೆ ಬಂದ ಕಾರಣಕ್ಕೆ 30 ಟಿಎಂಸಿಗಿಂತ ಹೆಚ್ಚು ನೀರು ಬಿಡಲಾಗಿದೆ. ಕಳೆದ ವರ್ಷವೂ 177 ಟಿಎಂಸಿಗಿಂತ ಹೆಚ್ಚುವರಿಯಾಗಿ 305 ಟಿಎಂಸಿ ನೀರು ಹರಿಸಲಾಗಿತ್ತು. 2022- 23 ರಲ್ಲಿ 400 ಟಿಎಂಸಿ ಹೆಚ್ಚುವರಿ ನೀರು ಹರಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಾನು ಭಕ್ತಿ, ವಿನಮ್ರತೆಯಿಂದ ಕೋರುತ್ತೇನೆ ಕಾವೇರಿ ಆರತಿಗೆ ಅಡ್ಡಿ ಪಡಿಸಬೇಡಿ,ಸಹಕಾರ ನೀಡಿ ಎಂದು ಮನವಿ ಮಾಡಿದರು.
ಅಣೆಕಟ್ಟಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಕಾವೇರಿ ಆರತಿಗೆ ಜಾಗ ನಿಗದಿ ಮಾಡಿದ್ದೇವೆ. ದೇವರಿಗೆ ಪ್ರಾರ್ಥನೆ ಮಾಡಲು ಅರ್ಜಿ ಹಾಕಬೇಕೆ, ಯಾರದ್ದಾದರೂ ಅನುಮತಿ ಬೇಕೆ ಎಂದು ಡಿಸಿಎಂ ಪ್ರಶ್ನಿಸಿದರು
ಬೆಂಗಳೂರಿನಲ್ಲಿ ಜಲಮಂಡಳಿಯಿಂದ ನಡೆಸಿದ ಕಾವೇರಿ ಆರತಿಗೆ 25 ಸಾವಿರ ಜನ ಸೇರಿದ್ದರು. ಇಲ್ಲಿ ಕಾವೇರಿ ಆರತಿ ನಡೆಸಿದರೆ ಮಂಡ್ಯ, ಮೈಸೂರು ಭಾಗದ 1,500 ಜನರಿಗೆ ಉದ್ಯೋಗ ದೊರಕುತ್ತದೆ. ಬೃಂದಾವನ ಉದ್ಯಾನ ಅಭಿವೃದ್ಧಿ ಮಾಡಿದರೆ ಸ್ಥಳಿಯ 3 ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ” ಎಂದು ಹೇಳಿದರು.
ಬೃಂದಾವನ ಉದ್ಯಾನವನ್ನು ಅತ್ಯಂತ ಹೆಚ್ಚು ಆಕರ್ಷಣೀಯಗೊಳಿಸುವುದು ನಮ್ಮ ಉದ್ದೇಶ. ಮೈಸೂರು ದಸರಾ ರೀತಿ ಅತ್ಯುತ್ತಮ ದೀಪಾಲಂಕಾರ ಮಾಡಲಾಗಿದೆ. ಅತ್ಯುತ್ತಮ ಕಾರಂಜಿಗಳನ್ನು ತರಿಸಲಾಗಿದೆ. ವಿದೇಶಗಳಿಂದ ಅಲಂಕಾರಿಕ ಸಸ್ಯಗಳನ್ನು ತರಿಸಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಇದನ್ನು ಅತ್ಯುತ್ತಮ ಪ್ರವಾಸಿ ಕೇಂದ್ರ ಮಾಡಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಖಾಸಗಿಯವರು ಬಂಡವಾಳ ಹೂಡಬಹುದು ಎಂದು ಆಹ್ವಾನ ಮಾಡಿದ್ದೇವೆ” ಎಂದು ಡಿಕೆಶಿ ಹೇಳಿದರು.
ರಾಜ್ಯದ ಅಣೆಕಟ್ಟುಗಳ ಗೇಟ್ ಗಳನ್ನು ದುರಸ್ತಿಗೊಳಿಸಲು ಈಗಾಗಲೇ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದ್ದೇವೆ. ಆ ಸಮಿತಿಯಿಂದ ವರದಿ ತೆಗೆದುಕೊಂಡು ಹಂತ, ಹಂತವಾಗಿ ರಾಜ್ಯದ ಅಣೆಕಟ್ಟುಗಳ ಗೇಟ್ ದುರಸ್ತಿಯನ್ನು ಮಾಡಬೇಕು ಎಂದು ಮುಂದಾಗಿದ್ದೇವೆ ಎಂದು ತಿಳಿಸಿದರು.
ಬಜೆಟ್ ಮಂಡಿಸಿ ಒಂದು ತಿಂಗಳಾಗಿದೆ ತಾಳ್ಮೆಯಿಂದ ಇದ್ದರೆ ಅನುದಾನ ಬಂದೇ ಬರುತ್ತದೆ. ನಾವು ಕೊಟ್ಟ ಮಾತನ್ನು ತಪ್ಪುವವರಲ್ಲ. ಆರ್ಥಿಕ ಇಲಾಖೆಯವರು ಆರ್ಥಿಕ ಶಿಸ್ತಿಗಾಗಿ ಹಂತ, ಹಂತವಾಗಿ ಹಣ ಬಿಡುಗಡೆ ಮಾಡುತ್ತಾರೆ. ಯಡಿಯೂರಪ್ಪ, ಕುಮಾರಸ್ವಾಮಿ, ಬೊಮ್ಮಾಯಿ ಕಾಲದಲ್ಲಿ ಬಜೆಟ್ ಗಿಂತ ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ, ನಮ್ಮನ್ನು ಟೀಕೆ ಮಾಡುವವರಿಗೆ ಮಾಧ್ಯಮಗಳು ಪ್ರಶ್ನೆ ಮಾಡಬೇಕು ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದೇ ವೇಳೆ ಕಾವೇರಿ ಕುರಿತು ಕವನ ವಾಚುಸುವ ಮೂಲಕ ಡಿಕೆಶಿ ಎಲ್ಲರ ಗಮನ ಸೆಳೆದರು.
ಮೈಸೂರು ರಾಜಮಾತೆ ತಮ್ಮ ಒಡವೆಗಳನ್ನು ಅಡವಿಟ್ಟು ಈ ಅಣೆಕಟ್ಟು ನಿರ್ಮಾಣಕ್ಕೆ ಮುನ್ನುಡಿ ಬರೆದರು. ಈ ಕಾರಣಕ್ಕೆ ಕಬ್ಬಿನ ಸಿಹಿ ಹಂಚಲಾಗುತ್ತಿದೆ, ಇಡೀ ಬೆಂಗಳೂರಿಗೆ, ತಮಿಳುನಾಡಿಗೆ ನೀರು ನೀಡಲಾಗುತ್ತಿದೆ ಎಂದು ಹೇಳಿದರು.