ಮೈಸೂರು: ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಜೀವನ ಸಾರವನ್ನು ತಿಳಿಸುತ್ತದೆ, ಶಿಷ್ಟರ ರಕ್ಷಣೆಗಾಗಿ ದುಷ್ಟರ ಸಂಹಾರ ಮಾಡಿದ ಶ್ರೀಕೃಷ್ಣನ ಬಾಲ್ಯದ ಲೀಲೆಗಳು ಮಕ್ಕಳಿಗೆ ಪ್ರೇರಣೆಯಾಗಿದೆ ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿ ಶಾಸ್ತ್ರಿ ಹೇಳಿದರು.

ನಗರದ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣ ದಾಮದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಮತ್ತು ಶ್ರೀ ಕೃಷ್ಣ ಟ್ರಸ್ಟ್ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಮಕ್ಕಳಿಗೆ ಕೃಷ್ಣ,ರಾಧಾ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಮಹಾಭಾರತ, ರಾಮಾಯಣ ಹಾಗೂ ಇತಿಹಾಸ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರ ಜವಾಬ್ದಾರಿಯಾಗಿದೆ, ಕಲಿಕೆ ವೇಳೆ ಮಕ್ಕಳಿಗೆ ನೀತಿ ಪಾಠಗಳು ಹಾಗೂ ಶ್ರೀ ಕೃಷ್ಣ ಲೋಕಕಲ್ಯಾಣಕ್ಕಾಗಿ ಮಾಡಿದ ಸಾಧನೆಗಳ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಶ್ರೀ ಕೃಷ್ಣ ಮತ್ತು ರಾಧೆಯ ವೇಷಭೂಷಣ ಧರಿಸಿ ಭಾಗವಹಿಸಿದ್ದರು.
ಉತ್ತಮವಾಗಿ ಶ್ರೀ ಕೃಷ್ಣ,ರಾಧೆ ವೇಷಧರಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು, ಜತೆಗೆ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಶ್ರೀಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್ ರಾವ್, ಉಪಾಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ರಾಘವೇಂದ್ರ, ಶ್ರೀವತ್ಸ, ಮುರಳಿ, ಮಂಗಳ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.