ಮೈಸೂರು: ನಮ್ಮ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಜಾತ್ರೆ, ಉತ್ಸವ, ಧಾರ್ಮಿಕ ಮಹೋತ್ಸವಗಳು ಸಹಕಾರಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಕೆ.ಆರ್. ನಗರದಲ್ಲಿ ನಡೆದ ಮಲೆ ಮಹದೇಶ್ವರ ಸ್ವಾಮಿ 54ನೇ ಉತ್ಸವದಲ್ಲಿ ಭಾಗಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
ಕಾರ್ತೀಕ ಮಾಸ ಬೆಳಕಿನ ಹಬ್ಬ, ನಮ್ಮೆಲ್ಲರಲ್ಲೂ ಇರುವ ಅಜ್ಞಾನವೆಂಬ ಅಂಧಕಾರವನ್ನು ತೊಡದುಹಾಕಿ, ಸುಜ್ಞಾನವೆಂಬ ಬೆಳಕನ್ನು ಹಚ್ಚುವ ಮಾಸ ಕಾರ್ತೀಕ. ಈ ಮಾಸದಲ್ಲಿ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಲಕ್ಷ ದೀಪೋತ್ಸವ ಮತ್ತು ಉತ್ಸವಗಳು ನಡೆಯುತ್ತವೆ. ಧಾರ್ಮಿಕ ವಿಚಾರಗಳ ವಿನಿಮಯ ಆಗುತ್ತದೆ. ಸಹಬಾಳ್ವೆಯ ಮಹತ್ವ ಸಾರುತ್ತವೆ ಎಂದು ಹೇಳಿದರು.
ಮಲೆ ಮಹದೇಶ್ವರ ಸ್ವಾಮಿಯವರು ಜನಪದರ ದೇವರು, ಅವರು ಹುಲಿಯ ಮೇಲೆ ಸಂಚಾರ ಮಾಡುತ್ತಿದ್ದರು ಎಂದು ಕೇಳಿದ್ದೇವೆ. ಆದರೆ ಅವರ ಮನಸ್ಸು ಮಲ್ಲಿಗೆಯಷ್ಟೇ ಮೃದುವಾಗಿತ್ತು. ಹೀಗಾಗಿಯೇ ಅವರು ಮಲ್ಲಿಗೆ ಮಾದಪ್ಪನಾಗಿ ಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.
ದೈವಾಂಶ ಸಂಭೂತರಾದ ಮಹದೇಶ್ವರಸ್ವಾಮಿಯವರು ಬೆಟ್ಟದ ಸರಣಿಯ ರಮಣೀಯತೆಗೆ ಮನಸೋತು ಮಹದೇಶ್ವರ ಬೆಟ್ಟದಲ್ಲಿಯೇ ನೆಲೆಸಿದರು. ಸುದೀರ್ಘ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದರು,ಇಂದಿಗೂ ತಮ್ಮ ತಪಃಶಕ್ತಿಯಿಂದ ಜನರ ಕಲ್ಯಾಣ ಮಾಡುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ರವಿಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.