ಬೆಂಗಳೂರು: ಕೆ ಪಿ ಎಸ್ ಸಿ ಮಂಡಳಿಯು ನಿರಂತರವಾಗಿ ಅನೇಕ ವೈಫಲ್ಯಗಳನ್ನು ಎದುರಿಸುತ್ತಾ ಬ್ರಷ್ಟಾಚಾರಿಗಳ ಆಡಂಬೋಲವಾಗಿ ಮಾರ್ಪಟ್ಟಿರುವುದು ದುರಂತ ಎಂದು ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.
ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ಅವರ ಬದುಕಿಗೆ ಬೆಳಕಾಗಬೇಕಿದ್ದ ಉದ್ಯೋಗ ಸೌಧ ಇಂದು ಬ್ರಷ್ಟಾಚಾರಿಗಳ ಆಡಂಬೋಲವಾಗಿ ಮಾರ್ಪಟ್ಟಿರುವುದು ರಾಜ್ಯದ ಕನ್ನಡಿಗರ ದುರದೃಷ್ಟವೇ ಸರಿ. ಈ ಬಗ್ಗೆ ನಿರಂತರವಾಗಿ ಹೋರಾಟವನ್ನು ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ಪರೀಕ್ಷಾರ್ಥಿಗಳ ಬೆಂಬಲಕ್ಕೆ ಸದಾಕಾಲ ಇರಲಿದೆ ಎಂದು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಡಾ. ಸತೀಶ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಜ.15 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪರೀಕ್ಷಾರ್ಥಿಗಳ ತೀವ್ರ ಪ್ರತಿಭಟನೆಯಲ್ಲಿ ಆಮ್ ಆದ್ವಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಎಲ್ಲ ನಾಯಕರು, ಕಾರ್ಯಕರ್ತರು ಭಾಗವಹಿಸಿ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
ಮಂಡಳಿಯಲ್ಲಿ ನಡೆಯುತ್ತಿರುವ ನಿರಂತರ ಪರೀಕ್ಷೆ ಪತ್ರಿಕೆಗಳಲ್ಲಿನ ಭಾಷಾಂತರ ಸಮಸ್ಯೆ, ಮರು ಪರೀಕ್ಷೆ, ಫಲಿತಾಂಶ ಬಂದರೂ ನೇಮಕಾತಿ ಪತ್ರ ನೀಡದೆ ಇರುವುದು, ಸದಸ್ಯರ ನಡುವಿನ ಒಮ್ಮತದ ಕೊರತೆ, ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸದಿರುವುದು ಸೇರಿದಂತೆ ಅನೇಕ ಗೊಂದಲಗಳನ್ನು ಶೀಘ್ರವೇ ಸರ್ಕಾರವು ಬಗೆಹರಿಸಬೇಕೆಂದು ಇದೇ ವೇಳೆ ಸತೀಶ್ ಒತ್ತಾಯಿಸಿದರು.