ಹುಣಸೂರು: ಹುಣಸೂರು ತಾಲೂಕು ಹೊನ್ನಿ ಕುಪ್ಪೆ ಗ್ರಾಮದಲ್ಲಿ ಊರಿನ ಹಿರಿಯರು ಹಿಂದಿನಿಂದ ನಡೆಸಿಕೊಂಡು ಬಂದ ಪದ್ದತಿಯನ್ನು ಈಗಿನವರು ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷ.
ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಇಟ್ಟಿಗೆ ಮತ್ತು ಮಣ್ಣಿನಿಂದ ಕೊಂತಿಗುಡಿ ನಿರ್ಮಿಸಿ ಕಳಶ ಇಟ್ಟು ಪೂಜೆ ಮಾಡಲಾಗುತ್ತಿದೆ. ಇದಕ್ಕೆ ತಿಂಗಳ ಮಾಮನ ಪೂಜೆ ಎಂದು ಕರೆಯುವುದು ವಾಡಿಕೆ.
ದೀಪಾವಳಿ ಹಬ್ಬ ಮುಗಿದ ತಕ್ಷಣ ಕೊಂತಿಗುಡಿ ಅಂದರೆ ತಿಂಗಳ ಮಾಮನ ಪೂಜೆಯನ್ನು ನೆರವೇರಿಸ್ತಾ ಬರಲಾಗುತ್ತಿದೆ.
ಈ ಬಾರಿ 16 ದಿನಗಳ ಕಾಲ ತಿಂಗಳ ಮಾಮನ ಪೂಜೆಯನ್ನು ಮಾಡಬೇಕೆಂದು ಊರಿನವರು ನಿರ್ಧರಿಸಿದ್ದೇವೆ ಎಂದು ಊರಿನ ಮುಖಂಡರಲ್ಲಿ ಒಬ್ಬರು ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷರೂ ಆದ ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.
ಐದು ದಿನ,ಎಂಟು ದಿನ 16 ದಿನ ಹೀಗೆ ಒಂದೊಂದು ಕಡೆ ಒಂದೊಂದು ರೀತಿ ಪೂಜೆ ಮಾಡಲಾಗುತ್ತದೆ. ಕೊನೆಯ ದಿನ ಕೊಂತಿಗುಡಿಯನ್ನು ವಿಸರ್ಜನೆ ಮಾಡುತ್ತಾರೆ.
ಕೊಂತಿ ಗುಡಿ ಪ್ರತಿಷ್ಠಾಪನೆ ಮಾಡಿ ಶಿವನನ್ನು ಆರಾಧನೆ ಮಾಡುವುದು ವಿಶೇಷ. ಇದನ್ನು ಕಳೆದ 70 ವರ್ಷಗಳಿಂದ ಊರಿನ ಹಿರಿಯರು ಮುಂದುವರಿಸಿಕೊಂಡು ಬಂದಿದ್ದು ಈ ಮೂಲಕ ಜಾನಪದ ಕಲೆಯನ್ನು ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ.

ಕೊಂತಿಗುಡಿ ಅಂದರೆ ತಿಂಗಳ ಮಾಮನ ಆರಾಧನೆ ಪ್ರಾರಂಭವಾದ ಮೇಲೆ ಪ್ರತಿದಿನ ಸಂಜೆ ಊರಿನ ಪ್ರತಿಯೊಂದು ಮನೆಯವರು ತಮ್ಮ ಮನೆಯಿಂದ ದೀಪವನ್ನು ತಂದು ಇಲ್ಲಿ ಇಟ್ಟು ಹಚ್ಚಿ ಪೂಜೆ ಮಾಡಿ ಮಧ್ಯರಾತ್ರಿ 12 ಗಂಟೆವರೆಗೂ ಜಾನಪದ ಗೀತೆಗಳನ್ನು ಹಾಡುವುದು, ಭಜನೆ ಮಾಡುವುದು ಕೋಲಾಟ ಆಡುವುದು ಹೀಗೆ ಒಂದೊಂದು ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಬರುತ್ತಾರೆ.ಜತೆಗೆ ಕಟ್ಟುನಿಟ್ಟಾಗಿ ನಡೆದುಕೊಳ್ಳುವುದು,ಅಪಚಾರವಾಗದಂತೆ ಎಚ್ಚರಿಕೆಯಿಂದ ಇರುವುದು ವಿಶೇಷ.
ಮನೆಗೆ ವಾಪಸು ಹೋಗುವಾಗ ತಾವು ತಂದ ದೀಪವನ್ನು ತೆಗೆದುಕೊಂಡು ಹೋಗುತ್ತಾರೆ.ಹೀಗೆ 16 ದಿನಗಳ ಕಾಲವೂ ಮುಂದುವರಿಯುತ್ತದೆ.
ನಗರ ಪ್ರದೇಶದ ಜನರಿಗೆ ತಿಂಗಳ ಮಾಮನ ಪೂಜೆ ಕುಂತಿಗುಡಿ ಇದು ಯಾವುದು ಗೊತ್ತಿಲ್ಲ. ಆದರೆ ಹೀಗೆ ಸಣ್ಣ ಪುಟ್ಟ ಗ್ರಾಮದವರು ಶಿವನ ಆರಾಧನೆಯನ್ನು ಈ ರೀತಿ ಆಚರಿಸುತ್ತಾ ಜಾನಪದ ಕಲೆಯನ್ನು ಬೆಳೆಸುತ್ತಾ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಮತ್ತು ಇದು ಮುಂದಿನ ಪೀಳಿಗೆಗೂ ಮುಂದುವರಿಯುವ ಅಗತ್ಯವಿದೆ.

