ಮಣ್ಣಿನಡಿ ಮಹಿಳೆಯ ಕೈ ಕಂಡು ಭೀತರಾದ ಜನ!

Spread the love

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಮಣ್ಣಿನಲ್ಲಿ ಅಪರಿಚಿತ ಮೃತ ದೇಹದ ಕೈ ಕಾಣುತ್ತಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ದುಷ್ಕರ್ಮಿಗಳು ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಅರೆಬರೆ ಹೂತು ಹಾಕಿ ಪರಾರಿಯಾಗಿದ್ದಾರೆ. ಮಣ್ಣಿನಿಂದ‌ ಮಹಿಳೆಯ ಕೈ ಕಾಣುತ್ತಿದ್ದು ಗ್ರಾಮದ ಜನತೆ ಭಯಭೀತರಾಗಿದ್ದಾರೆ.

ಪತ್ತೆಯಾಗಿರುವ ಶವ ಸುಮಾರು 35 ರಿಂದ 40 ವರ್ಷ ವಯಸ್ಸಿನ ವಿವಾಹಿತ ಮಹಿಳೆಯದ್ದು, ಕುತ್ತಿಗೆಯಲ್ಲಿ ತಾಳಿ,ಕಾಲಿನಲ್ಲಿ ಕಾಲುಂಗುರ ಹಾಗೂ ಕೈನಲ್ಲಿ ಚಿನ್ನದ ಬಣ್ಣದ ಬಳೆಗಳು ಇವೆ.

ಗುರುವಾರ ಗ್ರಾಮದ ಶಶಿಕುಮಾರ್ ಎಂಬುವವರು ದನ ಮೇಯಿಸುತ್ತಿದ್ದ ವೇಳೆ ನಾಯಿಗಳು ಭೂಮಿಯಲ್ಲಿ ಹೂತಿದ್ದ ದೇಹದ ವಾಸನೆ ಹಿಡಿದು ಮಣ್ಣು ಎರಚಾಡಿ ಎಳೆದಾಡುತ್ತಿದ್ದುದ್ದು ಕಂಡು ಬಂದಿದೆ.

ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ಶವದ ಮುಂಗೈ ಭೂಮಿಯಿಂದ ಹೊರಚಾಚಿರುವುದು ಕಾಣಿಸಿದೆ.

ಶಶಿಕುಮಾರ್ ಅವರು ಗೃಹ ರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಿನ್ನೆ ತಮ್ಮ ದನಗಳನ್ನು ಮೇಯಿಸಲು ಸುವರ್ಣವತಿ ನದಿಯ ನಿರ್ಜನ ಪ್ರದೇಶದ ಕಡೆ ತೆರಳಿದ್ದರು ಶವವನ್ನು ಕಂಡು ಗಾಬರಿಯಾಗಿ ಪಟ್ಟಣ ಠಾಣೆ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

ನಂತರ ಪೊಲೀಸರು ರಾತ್ರಿ 11 ಗಂಟೆಯಲ್ಲಿ ಶವವನ್ನು ಮಣ್ಣಿನಿಂದ ಹೊರತೆಗೆಸಿ ನೋಡಿದಾಗ ದೇಹ ವಿವಾಹಿತ ಮಹಿಳೆಯಾಗಿದ್ದು ತಾಳಿ ಕಾಲುಂಗುರ ಹಾಗೂ ಕೈನಲ್ಲಿ ಚಿನ್ನದ ಬಣ್ಣದ ಬಳೆ ಧರಿಸಿರುವುದು ಕಂಡು ಬಂದಿದೆ.

ನದಿ ದಡದ ನಿರ್ಜನ ಪ್ರದೇಶದ ಹಳ್ಳದಲ್ಲಿ ಶವ ಇದ್ದ ಸುಮಾರು 20 ಮೀಟರ್ ದೂರದಲ್ಲಿ ಒಂದು ದೀಪ, ಕುಡಿಯುವ ನೀರಿನ ಬಾಟಲಿ ಇನ್ನಿತರ ಪೂಜಾ ಸಾಮಗ್ರಿಗಳು ಪತ್ತೆಯಾಗಿರುವುದರಿಂದ ಮಾಟ, ಮಂತ್ರ ವಾಮಾಚಾರ ಶಂಕೆ ವ್ಯಕ್ತವಾಗಿದೆ.

ಯಾರೋ ದುಷ್ಕರ್ಮಿಗಳು ಮಹಿಳೆಯನ್ನು ಅತ್ಯಾಚಾರ ವ್ಯಸಗಿ ಕೊಲೆ ಮಾಡಿ ತಂದು ಹೂತು ಹಾಕಿದ್ದಾರೋ ಎಂಬ ಅನುಮಾನವೂ ಕಾಡುತ್ತಿದೆ.

ಸತ್ತಿರುವವರನ್ನು ತಂದು ಹೂತು ಹಾಕಿದ್ದಾರೋ ಅಥವಾ ಕೊಲೆ ಮಾಡಿ ಶವವನ್ನು ತಂದು ಹಾಕಿದ್ದಾರೊ ಎಂಬ ಅನುಮಾನಗಳಿವೆ.

ಶವವನ್ನು ರಾತ್ರಿಯೇ ಚಾಮರಾಜನಗರದ ಸಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದ್ದು ಶವ ಗುರುತು ಪತ್ತೆಗಾಗಿ ಇರಿಸಲಾಗಿದೆ.

ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವ ಮಾದಯ್ಯ, ಪಿ.ಎಸ್.ಐ ವರ್ಷ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.