(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ,ಏ.7: ಬೇರೆ ಜಿಲ್ಲೆಯವರು ಸಾವಿರಾರು ಕೋಟಿ ಹಣ ತಂದು ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೀರಾವರಿ ಕಲ್ಪಿಸಿಕೊಂಡು ಬೆಳೆ ಬೆಳೆಯುತ್ತಾರೆ ಆದರೆ ಇಲ್ಲಿ ಹತ್ತಿರದಲ್ಲೇ ನೀರು ಹರಿಯುತ್ತಿದ್ದರು ಏಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್
ಪ್ರಶ್ನಿಸಿದ್ದಾರೆ.
ತಾಲ್ಲೂಕಿನ ಸತ್ತೇಗಾಲ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ನೀರಾವರಿ ಇಲಾಖೆ ಏರ್ಪಡಿಸಿದ್ದ ಧನಗೆರೆ ಜಹಗೀರ್ ದಾರ್ ನಾಲೆ, ಸತ್ತೇಗಾಲ ಏತ ನೀರಾವರಿ ಹಾಗೂ ಸರಗೂರು ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತಾಸಕ್ತಿ ಸಭೆಯಲ್ಲಿ ರೈತರ ಅಭಿಪ್ರಾಯಗಳನ್ನು ಆಲಿಸಿ ನಂತರ ಶಾಸಕರು ಮಾತನಾಡಿದರು.

ಇದುವರೆಗೆ ಕಬಿನಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರು ಇರಲಿಲ್ಲ. ಆ ಜವಾಬ್ದಾರಿಯನ್ನು ಎಇಇ ಗಳಾದ ರಾಮಕೃಷ್ಣ ಹಾಗೂ ರಮೇಶ್ ನೋಡಿಕೊಳ್ಳುತ್ತಿದ್ದರು ಈಗ ಕಾರ್ಯಪಾಲಕ ಅಭಿಯಂತರರಾಗಿ ಈರಣ್ಣರವರು ಬಂದಿದ್ದಾರೆ.
ನಾನು ಪ್ರತಿ ಭಾರಿ ಇಲ್ಲಿಗೆ ಬಂದಾಗಲೂ ನಾಲೆ ದುರಸ್ತಿ ಪಡಿಸಿ ಕೊಡುವಂತೆ ಒತ್ತಾಯ ಕೇಳಿ ಬರುತ್ತಿತ್ತು ಆದರೂ ಇದು ಜವಾಬ್ದಾರಿ ಕೆಲಸ. ಬೇರೆ ಜಿಲ್ಲೆಯವರು ಸಾವಿರಾರು ಕೋಟಿ ಹಣ ತಂದು ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೀರಾವರಿ ಕಲ್ಪಿಸಿಕೊಂಡು ಬೆಳೆ ಬೆಳೆಯುತ್ತಾರೆ ಆದರೆ ಇಲ್ಲಿ ಹತ್ತಿರದಲ್ಲಿ ನೀರು ಹರಿಯುತ್ತಿದ್ದರು ಏಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ,ಇದು ಮದುವೆ ಮನೆಯಲ್ಲಿ ಗಂಜಿಗೆ ಅತ್ತಂತಾಗಿದೆ ಇಲ್ಲಿನ ಸ್ಥಿತಿ ಎಂದು ಬೇಸರ ಪಟ್ಟರು.
ಈ ಹೋಬಳಿಯ ರೈತರಿಗೆ ನೀರು ಕೊಡುವುದು ಸುಲಭ. ಈ ಜ್ವಲಂತ ಸಮಸ್ಯೆಗಳನ್ನು ನಿಮ್ಮ ಮುಂದೆ ಕುಳಿತು ಪರಿಹರಿಸಲು ಬಂದಿದ್ದೇನೆ ಕಾಲಾವಕಾಶ ಕೊಡಿ ವರ್ಷಕ್ಕೆ ಎರಡು ಬೆಳೆ ಬೆಳೆಯುವಂತಹ ಕೆಲಸ ಮಾಡುತ್ತೇನೆ. ಇದರಿಂದ ಧನಗೆರೆ ಜಹಗೀರ್ ದಾರ್ ನಾಲೆಯ 6060 ಎಕರೆ, ಸತ್ತೇಗಾಲ ಏತ ನೀರಾವರಿಯ 500 ಎಕರೆ ಹಾಗೂ ಸರಗೂರು ಅಚ್ಚುಕಟ್ಟು ವ್ಯಾಪ್ತಿಯ 450 ಎಕರೆ ರೈತರ ಕುಟುಂಬಗಳಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು.
ಆದರೆ ಹನೂರು ಕ್ಷೇತ್ರದ ಉಳಿದ ಹೋಬಳಿಗಳ ರೈತರ ಜಮೀನುಗಳಿಗೆ ನೀರು ತೆಗೆದುಕೊಂಡು ಹೋಗುವುದು ದುಸ್ಥರ. ಕೃಷಿಗೆ ನೀರಿಲ್ಲದೆ ಈಗಾಗಲೇ ಶೇಕಡ 30 ರಷ್ಟು ರೈತರು ಗುಳೆ ಹೋಗಿದ್ದಾರೆ, ಒಟ್ಟಾರೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ 52 ಕೋಟಿ ಅನುದಾನ ಬಂದಿದೆ. ಅದನ್ನು ಅನುಮೋದನೆ ಮಾಡಿಸಿ ಹಣ ಬಿಡುಗಡೆ ಮಾಡಿಸಲು ಕ್ರಮವಹಿಸುತ್ತೇನೆ. 52 ಕೋಟಿ ರೂ.ಗಳಿಗೆ ಡಿ.ಪಿ.ಆರ್ ಮಾಡದೆ ಆಗಲೇ ಎರಡು ಕೋಟಿ ಅನುದಾನ ತಂದಿದ್ದೆ ಎಂದರು.
ನೀರಿನ ಲಭ್ಯತೆಗೆ ದಾರಿ ಹುಡುಕುತ್ತೇನೆ ಆದರೆ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ವಾಗಬೇಕಿದೆ. ಇಲ್ಲಿ ಕನಿಷ್ಠ ಅಂತರ್ಜಲವಿದ್ದು, ಹೆಚ್ಚು ಕೆಲಸವಾಗಬೇಕು, ಸ್ಥಳಗಳನ್ನು ಗುರುತು ಮಾಡಿಕೊಂಡಿದ್ದೇನೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಮುಂದಿನ ವರ್ಷದೊಳಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಮಂಜುನಾಥ್ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಬಿನಿ ಕಚೇರಿಯಲ್ಲಿ ಸಭೆ ಕರೆಯಲು ಚರ್ಚಿಸಲು ಅವಕಾಶ ಮಾಡಿಕೊಡಿ,ಇವೇ ಮುಂತಾದ ಬೇಡಿಕೆಗಳನ್ನು ರೈತರು ಶಾಸಕರ ಮುಂದಿಟ್ಟರು.

ಮಾರಮ್ಮ ದೇವಸ್ಥಾನದಿಂದ ಕಾವೇರಿ ನದಿ ಹೋಗುವ ರಸ್ತೆ ತೀರಾರ ಹದಗೆಟ್ಟಿದ್ದು ಕೂಡಲೇ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಸಿದ ಶಾಸಕರು 3.20 ಕೋಟಿ ರೂ ಗಳಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಕಬಿನಿ ಕಾರ್ಯಪಾಲಕ ಅಭಿಯಂತರ ಈರಣ್ಣ ಮಾತನಾಡಿ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡುತ್ತೇವೆ. ಶೇಕಡ 75 ರಷ್ಟು ಇಲ್ಲಿ ಒಣ ಭೂಮಿ ಇದೆ ಶೇ. 35 ರಿಂದ 40 ರಷ್ಟು ರೈತರು ಗುಳೆ ಹೋಗಿದ್ದಾರೆ ಅವರುಗಳನ್ನು ಕರೆತಂದು ಮತ್ತೆ ರೈತರಿಂದ ಪುನರ್ ಕೃಷಿ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷೆ ಸುವರ್ಣ, ಸದಸ್ಯರಾದ ದೇವಿಕಾ, ಕವಿತಾ, ಗೋವಿಂದ, ಶಾಂತಕುಮಾರಿ, ಚಿಕ್ಕರವಳಿ, ಕಾಂತಣ್ಣ, ಕಬಿನಿ ಇಲಾಖೆ ಕಾರ್ಯಪಾಲಕ ಅಬಿಯಂತರ ಈರಣ್ಣ,ಸಹಾಯಕ ಕಾರ್ಯಪಾಲಕ ಅಬಿಯಂತರರುಗಳಾದ ರಾಮಕೃಷ್ಣ, ರಮೇಶ್, ಜಿ.ಪಂ. ಎಇಇ ಹಾಗೂ ಕೆ.ಆರ್.ಎ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ ಸತ್ತೇಗಾಲ ಪಿಡಿಒ ಜುನೈದ್ ಅಹಮದ್, ಧನಗೆರೆ ಪಿಡಿಒ ಕಮಲ್ ರಾಜು, ಮತ್ತಿತರರು ಪಾಲ್ಗೊಂಡಿದ್ದರು.