(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕೊಳ್ಳೇಗಾಲ ಉಪವಿಭಾಗ ಮಟ್ಟದ ಪ.ಜಾತಿ/ಪ.ಪಂಗಡದವರ ಕುಂದು-ಕೊರತೆ ಸಭೆ ಸಮರ್ಪಕ ಮಾಹಿತಿ ಇಲ್ಲದೆ ತರಾತುರಿಯಲ್ಲಿ ಕಾಟಾಚಾರಕ್ಕೆ ನಡೆಯಿತು.
ಪಟ್ಟಣದ ಪೊಲೀಸ್ ಉಪಾಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಕೊಳ್ಳೇಗಾಲ ಉಪವಿಭಾಗ ಮಟ್ಟದ ಪ.ಜಾತಿ/ಪ.ಪಂಗಡದವರ ಕುಂದು-ಕೊರತೆ ಸಭೆಗೆ ಸಭೆ ನಡೆಸುವ ಹಿಂದಿನ ದಿನ ಸಂಜೆ ತಮಗೆ ಬೇಕಾದ ಕೆಲವರ ವಾಟ್ಸಪ್ ಸಂಖ್ಯೆಗೆ ಪೊಲೀಸರು ಮಾಹಿತಿ ರವಾನಿಸಿದ್ದರು.
ಸಭೆ ನಡೆಸುವ ಒಂದು ವಾರ ಅಥವಾ 3 ದಿನಗಳ ಹಿಂದೆಯೇ ಸಂಬಂಧಪಟ್ಟ ಮುಖಂಡರಿಗೆ ಮಾಹಿತಿ ನೀಡಿದ್ದರೆ ಉಪವಿಭಾಗ ಮಟ್ಟದ ಸಭೆಯಾದ್ದರಿಂದ ಮುಖಂಡರು ನೂರಾರು ಸಂಖ್ಯೆಯಲ್ಲಿ ಸಭೆಗೆ ಭಾಗವಹಿಸ ಬಹುದಿತ್ತು.ಆದರೆ ಸರಿಯಾಗಿ ಮಾಹಿತಿ ತಲುಪದಿದ್ದರಿಂದ ಕೆಲವೆ ಮಂದಿ ಮಾತ್ರ ಭಾಗವಹಿಸಿದ್ದರು.

ಸಭೆಯಲ್ಲಿ ಪ.ಜಾತಿ/ಪ.ಪಂಗಡದವರ ಮೇಲಿನ ದೌರ್ಜನ್ಯ,ಮತ್ತಿತರ ಸಮಸ್ಯೆ ಕುರಿತು ಯಾವುದೆ ಗಂಭೀರ ಚರ್ಚೆಯಾಗಲಿಲ್ಲ.
ಭಾಗವಹಿಸಿದ್ದ ಮುಖಂಡರೂ ಕೂಡಾ ಚರ್ಚಿಸಲು ಮುಂದೆ ಬರಲಿಲ್ಲ. ಎಂದಿನಂತೆ ಕೇವಲ ಅಕ್ರಮ ಮಧ್ಯ ಹಾಗೂ ಇನ್ನಿತರ ಸಣ್ಣ-ಪುಟ್ಟ ವಿಚಾರಗಳಿಗಷ್ಟೆ ಸಭೆ ಸೀಮಿತವಾಯಿತು. ಒಟ್ಟಿನಲಿ ಪೊಲೀಸರು ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶ ಪಾಲಿಸ ಬೇಕಿತ್ತು ಹಾಗಾಗಿ ತಮಗೆ ಬೇಕಾದ ಕೆಲವರನ್ನು ಕರೆದು ಸಭೆ ನಡೆಸಿ ಮುಗಿಸಿದ್ದಾರೆ.
ಎಲ್ಲೋ ಒಂದು ಕೊಲೆ ನಡೆದಿದೆ ಅಂದರೆ 24 ಗಂಟೆಯೊಳಗೆ ಪ್ರಕರಣ ಭೇದಿಸುವ ನೀವು ಕೇವಲ ಮಧ್ಯ ಅಕ್ರಮ ಮಾರಾಟ ತಡೆಯಲು ಯಾಕೆ ಆಗುತ್ತಿಲ್ಲ, ಮಧ್ಯ ಅಕ್ರಮ ಮಾರಾಟ ಪ.ಜಾತಿ/ಪ.ಪಂಗಡಗಳ ಬೀದಿಗಳಲ್ಲಿಯೇ ಯಾಕೆ ನಡೆಯುತ್ತಿದೆ ಎಂದು ಪೊಲೀಸರ ವಿರುದ್ದ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಡಾ ಅಂಬೇಡ್ಕರ್ ಯುವಜನೇತರ ಸಂಘದ ಬಸ್ತಿಪುರ ಪ್ರಕಾಶ್ ಮಾತನಾಡಿ ನಿಮ್ಮ ಅವಧಿಯಲ್ಲಿ ಪರಿಶಿಷ್ಠರ ಎಷ್ಟು ಸಮಸ್ಯೆ ಬಗೆಹರಿಸಿದ್ದೀರಿ ಮಾಹಿತಿ ನೀಡಿ ಎಂದು ಕೇಳಿದರು.
ಗ್ರಾಮಗಳಲ್ಲಿ ಮಧ್ಯ ಅಕ್ರಮ ಮಾರಾಟ ಮಾಡುತ್ತಿದ್ದರೆ ನೇರವಾಗಿ ಹೋಗಿ ತಡೆಗಟ್ಟಿ ಅದನ್ನು ಬಿಟ್ಟು ಮಾಹಿತಿ ನೀಡಿದರೆ ಮಾತ್ರ ಕ್ರಮ ವಹಿಸುತ್ತೇವೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಎಲ್ಲೋ ಕೊಲೆ ನಡೆದಿದೆ ಅಂದರೆ 24 ಗಂಟೆಯೊಳಗೆ ಪ್ರಕರಣ ಭೇದಿಸುವ ನೀವು ಕೇವಲ ಮಧ್ಯ ಅಕ್ರಮ ಮಾರಾಟ ತಡೆಯಲು ಯಾಕೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಆನಂದ ಜ್ಯೋತಿ ಕಾಲೋನಿಯ ಆದಿಜಾಂಬವ ಸಮುದಾಯದ ಯಜಮಾನರಾದ ಶಿವಮಲ್ಲು ಅವರು ಹರಳೆ ಗ್ರಾಮಕ್ಕೆ ತೆರಳುವ ರಸ್ತೆಯಿಂದ ಕೊಳ್ಳೇಗಾಲ ಮೋಳೆ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಗಾಂಜಾ ಸೇವಿಸುವವರು ಮತ್ತು ಕುಡುಕರ ಹಾವಳಿ ಹೆಚ್ಚಾಗಿದೆ ನಿಯಂತ್ರಿಸಬೇಕೆಂದು ಆಗ್ರಹಿಸಿದರು.
ಶ್ರೀನಿವಾಸ್ ಅವರು ದೊಡ್ಡ ನಾಯಕರ ಬೀದಿಯಲ್ಲಿ ನಿರಂತರವಾಗಿ ಮಧ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಬೆಳಿಗ್ಗೆ 5 ಗಂಟೆಗೆ ಮಾರಾಟ ಪ್ರಾರಂಭಿಸುತ್ತಾರೆ ಪೊಲೀಸರು ಬಂದು ಬೀಟ್ ಮಾಡಿ ಹೋಗುತ್ತಾರೆ ಅಷ್ಟೇ ಎನೂ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಆಕ್ಷೇಪಿಸಿದರು.
ಉಗನಿ ಗ್ರಾಮದ ಕುಮಾರ್ ಗ್ರಾಮದಲ್ಲಿ ಅಕ್ರಮ ಮಧ್ಯ ಹಾವಳಿ ತಡೆಗಟ್ಟಿ ಎಂದು ಆಗ್ರಹಿಸಿದರೆ, ಮಧುವನಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎಲ್ಲಾ ಗ್ರಾಮಗಳ ಪ.ಜಾತಿ/ಪ.ಪಂಗಡಗಳ ಬೀದಿಗಳಲ್ಲಿಯೇ ಕುಡಿತದ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು.
ಮಾಂಬಳ್ಳಿ ಗ್ರಾಮದ ಬಸವರಾಜು ಮಾತನಾಡಿ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ,ಇಲ್ಲಿ ಠಾಣೆಯಿದ್ದರೂ ಸಹ ಪೊಲೀಸರು ಗಸ್ತು ಮಾಡುತ್ತಿಲ್ಲ ಆದ್ದರಿಂದ ಸಮಜೆ ೬ ರಿಂದ ರಾತ್ರಿ ೮ ರವರೆಗೆ ಗಸ್ತು ಮಾಡಿಸಿ ಎಂದು ಒತ್ತಾಯಿಸಿದರು.
ಭೀಮ ನಗರದ ಮುಖಂಡ ದಿಲೀಪ್ ಸಿದ್ದಪ್ಪಾಜಿ ಮಾತನಾಡಿ ಉಪವಿಭಾಗ ಮಟ್ಟದಲ್ಲಿ ಎಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ, ಎಷ್ಟನ್ನು ಇತ್ಯರ್ಥ ಗೊಳಿಸಿದ್ದೀರಿ, ಇನ್ನೆಷ್ಟು ಬಾಕಿ ಇವೆ ಎಂಬ ಬಗ್ಗೆ ಮೊದಲು ಸಭೆಗೆ ಮಾಹಿತಿ ನೀಡಿ ಎಂದು ಆಗ್ರಹಿಸಿದರು.

ಪುಂಡರು ಪ.ಜಾತಿ ಬೀದಿಗಳಿಗೆ ಬಂದು ವೀಲಿಂಗ್ ಮಾಡುತ್ತಿದ್ದಾರೆ ಅವರ ವಿರುದ್ದ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಹೇಳಿದರು.
ಪಟ್ಟಣದ ಮುಡಿಗುಂಡ ಮಾರುಕಟ್ಟೆ ಎದುರುಗಡೆ ಇರುವ ಪ.ಜಾತಿ ಬೀದಿಯಲ್ಲಿ ಹೆಚ್ಚು ಮಧ್ಯಪಾನ ಮಾಡಿ ಗಲಾಟೆ ಮಾಡುತ್ತಾರೆ ಎಂದು ಕರೆ ಮಾಡಿ ಮಾಹಿತಿ ನೀಡಿದರೆ ಪೊಲೀಸರು ಅಲ್ಲಿ ಏನು ನಡೆಯುತ್ತಿಲ್ಲ ನೀನೇ ಸುಳ್ಳು ದೂರು ನೀಡಿದ್ದೀಯ ಎಂದು ದಬಾಯಿಸುತ್ತಾರೆ ಆಗ ನಾನೇ ಖುದ್ದಾಗಿ ಠಾಣೆಗೆ ಹೋದರೆ ಓ… ನೀವಾ… ಹೋಗಿ ನೋಡಿ ಕ್ರಮವಹಿಸುತ್ತೇವೆ ಎನ್ನುತ್ತಾರೆ ಏಕೆ ನಿಮ್ಮ ಪೊಲೀಸರು ಮುಖ ನೋಡಿ ಪ್ರತಿಕ್ರಿಯಿಸುತ್ತಾರೆ ಎಂದು ಪ್ರಶ್ನಿಸಿದರು.

ಗ್ರಾಮಗಳಲ್ಲಿ ಪಂಚಾಯಿತಿ ನಡೆಸುವ ಯಜಮಾನರುಗಳು ಸಣ್ಣ-ಪುಟ್ಟ ವಿಚಾರಗಳಿಗೂ ಅತಿ ಹೆಚ್ಚು ದಂಡ ವಿಧಿಸುವುದು, ಬಹಿಷ್ಕಾರ ಹಾಕುವುದು ಮಾಡುತ್ತಾರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಹಿಸಿ ಪ.ಜಾತಿ/ಪ.ಪಂಗಡದವರು ದೂರು ನೀಡಲು ಠಾಣೆಗೆ ಬಂದರೆ ನಿಮ್ಮ ಅಧಿಕಾರಿಗಳು ಸಿಬ್ಬಂದಿಗಳು ಏರು ಧ್ವನಿಯಲ್ಲಿ ಮಾತನಾಡುತ್ತಾರೆ ಎಂದು ದೂರಿದ ಡಿ.ಎಸ್.ಎಸ್. ಸಂಚಾಲಕ ನಿಂಗರಾಜು, ಅಂಥವರನ್ನು ಬದಲಾಯಿಸಿ ಎಂದು ಒತ್ತಾಯಿಸಿದರು.
ಹನೂರು ತಾಲೂಕಿನ ಕೆಂಪಯ್ಯನ ಹಟ್ಟಿ ಹಾಗೂ ಯಳಂದೂರು ತಾಲೂಕಿನ ವೈ.ಕೆ ಮೋಳೆ ಗ್ರಾಮಸ್ಥರು ಮಾತನಾಡಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರ್ಕಾರ ನಿವೇಶನ ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಿದ್ದರು ಮೇಲ್ವರ್ಗದವರು ಭವನ ನಿರ್ಮಾಣ ಮಾಡಲು ತೊಂದರೆ ಕೊಡುತ್ತಿದ್ದಾರೆ ಈ ಕುರಿತು ಕ್ರಮ ವಹಿಸದಿದ್ದರೆ ಎಲ್ಲಾ ಸಂಘಟನೆಗಳ ನೆರವಿನಿಂದ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಇನ್ನಿತರ ಮುಖಂಡರು ಧ್ವನಿಗೂಡಿಸಿದರು.

ಮುಳ್ಳೂರು ಮಂಜುನಾಥ್ ಮಾತನಾಡಿ ಸಭೆ ನಡೆಸುವ ಮುನ್ನ 2 – 3 ದಿನಗಳ ಮುಂಚಿತವಾಗಿ ಮಾಹಿತಿ ನೀಡಿ, ಎಲ್ಲಾ ಪತ್ರಿಕಾ ಮಾಧ್ಯಮದವರಿಗೆ ಮಾಹಿತಿ ನೀಡಿ ಸಭೆಗೆ ಆಹ್ವಾನಿಸಿ, ಮಹಿಳಾ ಹೋರಾಟಗಾರರಿಗೆ ಮಾಹಿತಿ ನೀಡಿದ್ದರೆ ಅವರು ಸಭೆಗೆ ಬರುವವರಿದ್ದರು. ಹಾಗೆಯೇ ಎಲ್ಲಾ ಇಲಾಖೆಗಳಲ್ಲೂ ಎಸ್ಸಿ/ಎಸ್‌ಟಿ ಸಭೆ ಆಗಬೇಕು, ಸಭೆ ನಡಾವಳಿ ದಾಖಲಾಗಬೇಕು ಎಂದು ಆಗ್ರಹಿಸಿದರು.
ದೊಡ್ಡ ನಾಯಕರ ಬೀದಿಯ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಮಾಡುವುದಾಗಿ ಕಿತ್ತುಹಾಕಿ 3 ತಿಂಗಳಾದರೂ ಕಾಮಗಾರಿ ಪ್ರಾರಂಭಿಸಿಲ್ಲ. ಇದರಿಂದಾಗಿ ಮನೆಯ ಮುಂದೆ ತೆಗೆದಿರುವ ಗುಂಡಿಗೆ ವೃದ್ಧರು ಆಯತಪ್ಪಿ ಬಿದ್ದು ಅನಾಹುತ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮುದಾಯದ ಮುಖಂಡ ಸುರೇಂದ್ರ ಗಮನ ಸೆಳೆದರು.
ಡಿ.ವೈ.ಎಸ್.ಪಿ ಧರ್ಮೇಂದ್ರ ಮಾತನಾಡಿ ಇಂದಿನ ಸಭೆಯಲ್ಲಿ 20 ಸಮಸ್ಯೆಗಳು ಬಂದಿವೆ. ಈ ಬಾರಿ 21 ಗಾಂಜಾ ಪ್ರಕರಣ 95 ಅಬಕಾರಿ ಪ್ರಕರಣ 19 ಪಡಿತರ ಅಕ್ಕಿ ಪ್ರಕರಣ 7 ಸಿಡಿ ಮದ್ದು ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ತಿಳಿಸಿದರು.

2024 ರಲ್ಲಿ 27 ಜಾತಿ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು 4 ಪ್ರಕರಣಗಳು ಸುಳ್ಳು ಅವುಗಳಿಗೆ ಬಿ ರಿಪೋರ್ಟ್ ಹಾಕಲಾಗಿದೆ ಉಳಿದ 23 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಈ ಬಾರಿ (2025 ರಲ್ಲಿ) 11 ಜಾತಿ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಮೂರು ಪ್ರಕರಣಗಳು ತನಿಖೆ ಹಂತದಲ್ಲಿವೆ. ಜಾತಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಜಾರಿ ನಿರ್ದೇಶನಾಲಯ ಪ್ರತಿ ಜಿಲ್ಲೆಯಲ್ಲೂ ಒಂದು ಠಾಣೆಯನ್ನು ತೆರೆಯುತ್ತಿದೆ ಇನ್ನು ಮುಂದೆ ಜಾತಿ ದೌರ್ಜನ್ಯ ಪ್ರಕರಣಗಳನ್ನು ಅವರೇ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಸಭೆಯಲ್ಲಿ ಜಿ.ಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ನಟರಾಜು ಮಾಳಿಗೆ, ಮುಖಂಡರಾದ ಮಾಂಬಳ್ಳಿ ಬಸವರಾಜು, ನಗರಸಭಾ ಸದಸ್ಯ ಶಾಂತರಾಜು, ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್, ಕಾರ್ಯದರ್ಶಿ ಪಾಪಣ್ಣ, ಪ್ರಕಾಶ್, ನಾಗರಾಜು, ಸುರೇಂದ್ರ, ಅಣಗಳ್ಳಿ ಬಸವರಾಜು, ಶಂಕರ್ ಚೇತನ್, ಮುಳ್ಳೂರು ಮಂಜುನಾಥ್, ಡಿ.ಎಸ್.ಎಸ್. ಸಂಚಾಲಕರಾದ ಯರಿಯೂರು ರಾಜಣ್ಣ, ಮ.ಮ. ಬೆಟ್ಟ ದೊರೆಸ್ವಾಮಿ (ಜಾನಿ), ಅಣಗಳ್ಳಿ ನಿಂಗರಾಜು, ಮ.ಮ. ಬೆಟ್ಟ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಜಯಕುಮಾರ್, ದೊಡ್ಡಾಲತ್ತೂರು ಗುರುದೇವ್, ಮ.ಮ. ಬೆಟ್ಟ ಸಿ.ಪಿ.ಐ ಜಗಧೀಶ್ ಪಟ್ಟಣ ಠಾಣೆ ಪಿ.ಎಸ್.ಐ ವರ್ಷ ಪಾಲ್ಗೊಂಡಿದ್ದರು.