ಏ.28 ರಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಇಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ಇದೇ ಏ.28 ರಂದು ಚುನಾವಣೆ ನಡೆಯಲಿದೆ.

ಒಟ್ಟು 10 ನಿರ್ದೇಶಕರ ಸ್ಥಾನಗಳಿಗೆ 33 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಸಾಲಗಾರರ ಕ್ಷೇತ್ರದ 9 ನಿರ್ದೇಶಕರುಗಳ ಸ್ಥಾನಗಳಿಗೆ ಹಾಗೂ ಸಾಲಗಾರರಲ್ಲದ ಕ್ಷೇತ್ರದ ಒಂದು ನಿರ್ದೇಶಕ ಸ್ಥಾನ ಒಟ್ಟು 10 ಸ್ಥಾನಗಳಿಗೆ ಅಂದು ಚುನಾವಣೆ ನಡೆಯಲಿದೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮ ಹಾಗೂ ಸಂಘದ ಬೈಲದ ಪ್ರಕಾರ ಆಡಳಿತ ಮಂಡಳಿಯು 13 ನಿರ್ದೇಶಕರ ಸ್ಥಾನಗಳನ್ನು ಹೊಂದಿರಬೇಕು.

ಈ ಪೈಕಿ ಚುನಾಯಿಸಬೇಕಾದ ಸ್ಥಾನಗಳು ಒಟ್ಟು 12, ಸಾಲಗಾರರ ಕ್ಷೇತ್ರದಿಂದ 11 ಸ್ಥಾನಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನ.

ಈಗಾಗಲೇ ಸಾಲಗಾರರ ಕ್ಷೇತ್ರದ 2 ಮಹಿಳಾ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಉಳಿದ 9 ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರ ಕಚೇರಿಯ ಅಧೀಕ್ಷಕರು ಹಾಗೂ ಚುನಾವಣಾ ಅಧಿಕಾರಿಗಳು ಆಗಿರುವ ಎಸ್. ನಾಗೇಶ್ ತಿಳಿಸಿದರು.

ಈ ಪೈಕಿ 5 ಸಾಮಾನ್ಯ ಸ್ಥಾನಗಳಿಗೆ 12 ಅಭ್ಯರ್ಥಿಗಳು ಪ ಜಾತಿಯ ಒಂದು ಸ್ಥಾನಕ್ಕೆ 6 ಅಭ್ಯರ್ಥಿಗಳು, ಪ. ಪಂಗಡದ ಒಂದು ಸ್ಥಾನಕ್ಕೆ 2 ಅಭ್ಯರ್ಥಿಗಳು, ಬಿ.ಸಿ. ಎಂ (ಬಿ) ಒಂದು ಸ್ಥಾನಕ್ಕೆ 4 ಅಭ್ಯರ್ಥಿಗಳು, ಬಿ.ಸಿ. ಎಂ (ಎ) ಒಂದು ಸ್ಥಾನಕ್ಕೆ 2 ಅಭ್ಯರ್ಥಿಗಳು, ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಾಲಗಾರರರ ಕ್ಷೇತ್ರದಲ್ಲಿ ಒಟ್ಟು 1605 ಮತದಾರರಿದ್ದು ಪ್ರತಿ ಮತದಾರರು 9 ಮತಗಳನ್ನು ಚಲಾಯಿಸುವ ಹಕ್ಕು ಹೊಂದಿದ್ದಾರೆ. ಹಾಗೆಯೇ ಸಾಲಗಾರರಲ್ಲದ ಕ್ಷೇತ್ರದಲ್ಲಿ 392 ಮತದಾರರಿದ್ದು ಒಂದು ಮತವನ್ನಷ್ಟೇ ಚಲಾಯಿಸಬಹುದಾಗಿದೆ.

ಹಿಂದಿನ ಆಡಳಿತ ಮಂಡಳಿಯ ಅವಧಿ ಕಳೆದ ಮಾರ್ಚ್ 31 ಕ್ಕೆ ಮುಕ್ತಾಯಗೊಂಡಿದ್ದು ವ್ಯವಹಾರದ ದೃಷ್ಟಿಯಿಂದ ಅಂದಿನಿಂದ ಸಂಘಕ್ಕೆ ಆಡಳಿತಾಧಿಕಾರಿಯಾಗಿ ಡಿ.ಸಿ.ಸಿ ಬ್ಯಾಂಕಿನ ಮೇಲ್ವಿಚಾರಕರಾದ ಕುಮಾರ್ ಅವರನ್ನು ನೇಮಿಸಲಾಗಿದೆ.

ಕಳೆದ 15 ದಿನಗಳಿಂದ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು ಇದೆ ಏ.18 ರಿಂದ 20 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು ಏ.20  ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು.

ಈ ವೇಳೆ ಸಾಲಗಾರರ ಕ್ಷೇತ್ರದಿಂದ 59 ಉಮೇದುವಾರರಿಂದ 61 ಅರ್ಜಿಗಳು ಬಂದಿದ್ದವು. ಏ. 21ರಂದು ನಾಮಪತ್ರ ಪರಿಶೀಲನೆ ನಡೆದು 22 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದರಿಂದ 33 ಮಂದಿ ನಾಮಪತ್ರ ವಾಪಸ್ ಪಡೆದು ಕೊಂಡಿದ್ದು 26 ಮಂದಿ ಕಣದಲ್ಲಿದ್ದಾರೆ.

ಹಾಗೆಯೇ ಸಾಲಗಾರರಲ್ಲದ ಕ್ಷೇತ್ರದ ಒಂದು ಸ್ಥಾನಕ್ಕೆ 10 ಮಂದಿ ನಾಮಪತ್ರ ಸಲ್ಲಿಸಿದರು ಆ ಪೈಕಿ 3 ಮಂದಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದು ಅಂತಿಮವಾಗಿ 7 ಮಂದಿ ಕಣದಲ್ಲಿ ಉಳಿದಿದ್ದಾರೆ.

ಈ ಎಲ್ಲಾ ನಿರ್ದೇಶಕರುಗಳ ಸ್ಥಾನಗಳಿಗೆ ಇದೇ 28 ರಂದು ಸೋಮವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಲಿದೆ, ಚುನಾವಣೆಯ ನಂತರ ಅಂದೇ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ ಎಂದು ಎಸ್. ನಾಗೇಶ್ ಅವರು ವಿವರಿಸಿದರು.