ಡಾ.ರಾಜ್ ಕುಮಾರ್, ಡಾ.ಅಂಬೇಡ್ಕರ್ ರಸ್ತೆ ಅಗಲೀಕರಣ:15 ದಿನದಲ್ಲಿ ವರದಿ ನೀಡಿ-ಕೃಷ್ಣಮೂರ್ತಿ ಸೂಚನೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಡಾ.ರಾಜ್ ಕುಮಾರ್ ಹಾಗೂ ಡಾ. ಅಂಬೇಡ್ಕರ್ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನ ಕರೆಸಿ ಪರಿಶೀಲನೆ ಮಾಡಿ ತೀರ್ಮಾನ ಕೈಗೊಂಡು 15 ದಿನದೊಳಗೆ ವರದಿ ನೀಡಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಈ ಎರಡು ರಸ್ತೆ ಅಗಲೀಕರಣ ಪ್ರಕ್ರಿಯೆ ಕೆಲಸ ಸಮರೋ ಪಾಧಿಯಲ್ಲಿ ನಡೆಯಬೇಕು ಎಂದು ತಾಕೀತು ಮಾಡಿದರು.

ಸದನದಲ್ಲಿ ಕ್ಷೇತ್ರದ ಅಭಿವೃದ್ಧಿ ಸಂಬಂಧ ಹಲವು ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಅದರಲ್ಲಿ ರಸ್ತೆ ಅಗಲೀ ಕರಣವು ಒಂದು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿ ರಸ್ತೆ ಅಗಲೀಕರಣಕ್ಕೆ ಅನುದಾನ ಕೇಳಿದ್ದೇನೆ. ಅವರು ಭರವಸೆ ನೀಡಿದ್ದಾರೆ.ಹಾಗಾಗಿ ನಗರಸಭೆ ಹಾಗೂ ಲೋಕೋಪಯೋಗಿ ಅಧಿಕಾರಿಗಳು ತಕ್ಷಣ ರಸ್ತೆ ಒತ್ತುವರಿ ವರದಿ ಸಲ್ಲಿಸಬೇಕು ಎಂದು ಹೇಳಿದರು

ಪೌರಾಯುಕ್ತ ರಮೇಶ್ ಮಾತನಾಡಿ ಮೊದಲು ಸರ್ವೆ ಮಾಡೋಣ, ಮೂಲ ರಸ್ತೆ ಎಷ್ಟು ಅಡಿ ಇದೆ, ಅದರಲ್ಲಿ ಒತ್ತುವರಿಯಾಗಿರುವುದು ಎಷ್ಟು? ಸಾರ್ವಜನಿಕರ ಆಸ್ತಿಯನ್ನು ಎಷ್ಟು ಸ್ವಾಧೀನ ಪಡಿಸಿಕೊಳ್ಳಬೇಕು ಅದಕ್ಕೆ ಪರಿಹಾರ ಏನು ಕೊಡಬೇಕು ಎಂಬ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳೋಣ ಸುಮ್ಮನೆ ಎಲ್ಲರಿಗೂ ಪರಿಹಾರ ಕೊಡಲು ನಗರಸಭೆಯಲ್ಲಿ ಹಣ ಇರಲಾರದು ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಶಾಸಕರು ಈ ಹಿಂದೆ ಚಾಮರಾಜನಗರದಲ್ಲಿ ರಸ್ತೆ ಅಗಲೀಕರಣ ಮಾಡುವ ವೇಳೆ ಯಾರಿಗೂ ಪರಿಹಾರ ನೀಡಿಲ್ಲ. ಇಲ್ಲೂ ಹಾಗೇ ಮಾಡೋಣ. ಆದ್ದರಿಂದ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಿ 15 ದಿನದೊಳಗೆ ವರದಿ ನೀಡಿ ಎಂದು ಸೂಚಿಸಿದರು.

ಕೊಳ್ಳೇಗಾಲ ಸುತ್ತ ಬೈಪಾಸ್ ಆಗಿದೆ. ಇದ್ದರಿಂದ ಪಟ್ಟಣದಲ್ಲಿ ನಡೆಯುವ ವ್ಯಾಪಾರ-ವಹಿವಾಟಿಗೆ ತೊಂದರೆ ಆಗುತ್ತದೆ. ಹಸಗಾಗಿ ಪಟ್ಟಣದ ಅಭಿವೃದ್ಧಿಯ ಕೆಲಸ ಶೀಘ್ರ ಆಗಬೇಕು ಎಂದು ತಿಳಿಸಿದರು.

ನಂಜಯ್ಯನ ಕಟ್ಟಿ ಕೆರೆ ಸ್ವರೂಪವೇ ಇಲ್ಲ ಎಲ್ಲವನ್ನು ಕಾನೂನು ಪ್ರಕಾರ ಮಾಡಲು ಹೋದರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಸತ್ತೇಗಾಲ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗಲಿದೆ ಈಗಾಗಲೇ ಸರ್ಕಾರಕ್ಕೆ ಪ್ರಸ್ಥಾವನೆ ಹೋಗಿದೆ ಅನುಮೋದನೆ ಬಾಕಿ ಇದೆ. ಅಲ್ಲಿ ಪಟ್ಟಣ ಪಂಚಾಯಿತಿ ರಚನೆ ಮಾಡಲು ಬೇಕಾದಂತಹ 31ಮಂದಿ ಸದಸ್ಯರಿದ್ದಾರೆ ಎಂದು ಹೇಳಿದರು.

ಈ ವೇಳೆ ಟೌನ್ ಪ್ಲಾನಿಂಗ್ ಸಹಾಯಕ ನಿರ್ದೇಶಕ ಲಕ್ಷ್ಮೀಶ್ ಈ ಎರಡು ರಸ್ತೆಯ ನಕ್ಷೆಯನ್ನು ಶಾಸಕರಿಗೆ ನೀಡಿ ಮಾಹಿತಿ ನೀಡಿದರು.

ನಗರಸಭೆ ಸದಸ್ಯ ಶಾಂತರಾಜು ಮಾತ ನಾಡಿ, ಹಿಂದೆಯು 80 ಅಡಿ ರಸ್ತೆ ಅಗಲೀಕರಣಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿತ್ತು. ಅದನ್ನು ಬಳಿಸಿಕೊಂಡರೆ ಕೆಲಸ ಸಲೀಸಾಗುತ್ತದೆ ಎಂದರು. ಸದಸ್ಯ ಪ್ರಶಾಂತ್ 100 ಅಡಿ ರಸ್ತೆ ಮಾಡುವಂತೆ ಸಲಹೆ ನೀಡಿದರು. ನಗರಸಭೆ ಪೌರಾಯುಕ್ತ ರಮೇಶ್ ಮಾತನಾಡಿ, ಟೋಟಲ್ ಸ್ಟೇಷನ್ ಸರ್ವೆ ಆಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ನೌಕರ ರಾಘವೇಂದ್ರ ಮಾತನಾಡಿ 1961ರಲ್ಲಿ ಈ ರಸ್ತೆಯನ್ನು 60 ಅಡಿ ರಸ್ತೆ ನಿರ್ಮಿಸಲು ಪ್ರಸ್ತಾವನೆಯಾಗಿತ್ತು ಈಗ 80 ಅಡಿ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಿಬ್ಬಂದಿ ರಾಘವೇಂದ್ರ ಮಾಹಿತಿಗೆ ಪ್ರಶಂಸೆ ವ್ಯಕ್ತಪಡಿಸಿದ ಶಾಸಕರು,ನಗರಸಭೆ ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳನ್ನು ಆಯುಕ್ತರ ಜತೆ ಸೇರಿ ಬಗೆಹರಿಸುವಂತೆ  ಸಲಹೆ ನೀಡಿದರು.

ನಗರದ ಬಹುತೇಕ ಬಡಾವಣೆಗಳಿಗೆ ಪ್ಲಾನ್ ಕರಡು ತಯಾರಿಸಿರುವ ಅಂದಿನ ಅಧಿಕಾರಿಗಳು ಅನುಮೋದನೆ ಮಾಡಿಸಿಲ್ಲ ಈ ಬಡಾವಣೆಯ ನಿವಾಸಿಗಳು ಅದನ್ನೇ ಪ್ಲಾನ್ ಎಂದು ತಿಳಿದುಕೊಂಡು ಇಟ್ಟುಕೊಂಡಿದ್ದಾರೆ ಆದರೆ ಈಗ ಕಟ್ಟಡ ಪರವಾನಗಿ ಕೊಡುವ ವೇಳೆ ಟೌನ್ ಪ್ಲಾನ್ ನವರು ಅನಧಿಕೃತ ಎಂದು ಪರವಾನಗಿ ನೀಡುತ್ತಿಲ್ಲ.

ಈ ವಿಚಾರದಲ್ಲಿ ಯಾವ ಯಾವ ಅಧಿಕಾರಿಗಳು ಲೋಪವೆಸಗಿದ್ದಾರೆ, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಹಾಗೆಯೇ ಯಾರು ಗುತ್ತಿಗೆದಾರರು ಈ ಬಡಾವಣೆಗಳ ಕಾಮಗಾರಿ ನಡೆಸಿ ಪರಿಪೂರ್ಣಗೊಳಿಸಿಲ್ಲವೋ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅವರ ಪರವಾಗಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕಾನೂನು ಬದ್ಧವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕೃಷ್ಣಮೂರ್ತಿ ಸೂಚಿಸಿದರು.

ಆಯುಕ್ತರ ಮೇಲೆ ಗರಂ, ಎಇಇ ಸುರೇಶ್‌ಗೆ ತರಾಟೆ:
ಸಾಮಾನ್ಯ ಸಭೆ ಆಜೆಂಡವನ್ನು ಶಾಸಕರಿಗೆ ತಲುಪಿಸದ ಹಿನ್ನಲೆ ನಗರಸಭೆ ಆಯುಕ್ತ ಎ.ರಮೇಶ್ ಮೇಲೆ ಶಾಸಕರು ಅಸಮಾಧನ ಹೊರಹಾಕಿದರು.

ಬಳಿಕ ಎಂಜಿನಿಯರ್ ಸುರೇಶ್ ಅವರ ಜವಬ್ದಾರಿ ಕುರಿತು ಸಭೆಯಲ್ಲಿ ಪ್ರಶ್ನಿಸುತ್ತಿದ್ದ ಶಾಸಕರು ನಿಮಗೆ ಇಲ್ಲಿ ಕೆಲಸ ಮಾಡಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಇಲ್ಲಿ ಕೆಲಸ ಮಾಡಿ ಇಲ್ಲದಿದ್ದರೆ ನನಗೆ ಇಲ್ಲಿ ಕೆಲಸ ಮಾಡಲು ಆಗಲ್ಲ ಎಂದು ಪತ್ರ ನೀಡಿ ಹೊರಟುಹೋಗಿ, ಬೇರೆೆಯವರನ್ನು ಹಾಕಿಸಿಕೊಳ್ಳುವೆ ಎಂದು ತರಾಟೆಗೆ ತೆಗೆದುಕೊಂಡರು.

ಬಿ-ಖಾತೆ ಹೆಲ್ಪ್ ಡೆಸ್ಕ್ ತೆರೆಯಿರಿ:
ಬಿ-ಖಾತೆ ವಿತರಣೆಗೆ ಕಂದಾಯ ಪಾವತಿಸುವ ಬಗೆಗಿನ ಗೊಂದಲ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಈ ಬಗ್ಗೆ ನಗರಸಭೆ ಸದಸ್ಯರೊಬ್ಬರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೆಲವು ಸದಸ್ಯರು ಅಸಮಾಧನ ಹೊರಹಾಕಿದರು.

ಸದಸ್ಯ ಧರಣೇಶ್ ಅಧಿಕಾರಿಗಳಿಂದ ಗೊಂದಲ ಉಂಟಾಗಿದೆ ಎಂದರು.

ಈ ವೇಳೆ ಕಂದಾಯ ಅಧಿಕಾರಿ ನಂಜುಂಡಸ್ವಾಮಿ ಮಾತನಾಡಿ, 2024- 25 ನೇ ಸಾಲಿನ ಹಿಂದಿನ 6 ವರ್ಷಕ್ಕೆ ಡಬಲ್ ಟ್ಯಾಕ್ಸ್ ಹಾಗೂ ಪ್ರಸಕ್ತ 1 ವರ್ಷಕ್ಕೆ ಸಿಂಗಲ್ ಟ್ಯಾಕ್ಸ್ ಕಟ್ಟಬೇಕೆಂದರು.

ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಎ ಖಾತಾ ಬಿ ಖಾತಾಗಳಿಗೆ ರಾಜ್ಯಾದ್ಯಂತ ಒಂದೇ ನಿಯಮ, ಕೊಳ್ಳೇಗಾಲಕ್ಕೆ ಮಾತ್ರ ಅಲ್ಲ ಆದರೆ ರಾಜ್ಯದ ಯಾವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸೃಷ್ಟಿಯಾಗದ ಗೊಂದಲ ಇಲ್ಲಿ ಹೇಗೆ ಸೃಷ್ಟಿಯಾಯಿತು. ಜಿಲ್ಲಾಧಿಕಾರಿಗಳು ಈ ಕುರಿತು ಕಾರ್ಯಗಾರ ನಡೆಸಿದ್ದಾರೆ ಈ ವೇಳೆ ಪ್ರಸ್ತಾಪ ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದರು.

ಸರ್ಕಾರದ ಸುತ್ತೋಲೆಯಂತೆ ಕಾರ್ಯ ನಿರ್ವಹಿಸಿ, ಸಾರ್ವಜನಿಕರಿಗೆ ಹೆಲ್ಪ್ ಡೆಸ್ಕ್ ತೆರೆದು ಮಾಹಿತಿ ನೀಡಿ ಎಂದು ಕಂದಾಯ ಅಧಿಕಾರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ನಗರ ಸಭಾಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ. ಶಂಕರ್, ಸ್ತಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರುಗಳಾದ ಶಾಂತರಾಜು, ರಾಜೇಂದ್ರ, ಸುಮಾಸುಬ್ಬಣ್ಣ, ನಾಶೀರ್ ಶರೀಫ್, ರಾಮಕೃಷ್ಣ, ಧರಣೇಶ್, ಪ್ರಕಾಶ್, ಮಂಜುನಾಥ್, ಕವಿತಾ, ರಾಘವೇಂದ್ರ ನಗರಸಭೆಯ ಆಯುಕ್ತ ರಮೇಶ್, ಎ.ಇ. ಸುರೇಶ್, ಜೆ ಇ ನಾಗೇಂದ್ರ ಸಮುದಾಯ ಘಟಕಾಧಿಕಾರಿ ಪರಶಿವಮೂರ್ತಿ, ಕಂದಾಯ ಅಧಿಕಾರಿ ನಂಜುಂಡಸ್ವಾಮಿ, ರಾಘವೇಂದ್ರ, ಆರೋಗ್ಯ ನಿರೀಕ್ಷಕ ಚೇತನ್, ಲಕ್ಷ್ಮೀ ಮತ್ತಿತರರು ಹಾಜರಿದ್ದರು.