(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಅಂಬೇಡ್ಕರ್ ಆಶಯದಂತೆ ಸರ್ಕಾರಗಳು ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸಮಾನತೆ ಕಲ್ಪಿಸಿ ಕೊಡುವಲ್ಲಿ ಬಹಳ ಶ್ರಮ ವಹಿಸುತ್ತಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಕುಂತೂರು ರಾಜೇಂದ್ರ ತಿಳಿಸೊ.
ಹೆಣ್ಣು, ಗಂಡು ಎಂಬ ತಾರತಮ್ಯವಿಲ್ಲದೆ ಎಲ್ಲಾ ಮಕ್ಕಳ ಕನಸನ್ನು ನನಸು ಮಾಡಬೇಕೆಂದರೆ ಶಿಕ್ಷಕರು, ಪೋಷಕರ ಜೊತೆಗೆ ವಿದ್ಯಾರ್ಥಿಗಳ ಮನೋಬಲ ಒಟ್ಟಿಗೆ ಸೇರಿದರೆ ಮಾತ್ರ ಕನಸು ನನಸಾಗಲಿದೆ ಎಂದು ಅವರು ಹೇಳಿದರು.
ಪಟ್ಟಣದ ಸರ್ಕಾರಿ ಎಸ್.ವಿ.ಕೆ ಬಾಲಿಕಾ ಪದವಿ ಪೂರ್ವ ಕಾಲೇಜುನಲ್ಲಿ ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ, ಚಾ.ನಗರ ಜಿ.ಪಂ ವತಿಯಿಂದ ನಡೆದ ಪೋಷಕರ-ಶಿಕ್ಷಕರ ಮಹಾಸಭೆ-2025 ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಮಾಜಿ ಪ್ರಧಾನಿ ನೆಹರು ಅವರು ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದರು ಅವರ ಭವಿಷ್ಯದ ಕನಸು ನನಸು ಮಾಡಲಿಕ್ಕಾಗಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಈ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಸರ್ಕಾರ ಇದುವರೆಗೂ ಯಾವುದೇ ಶಿಕ್ಷಕರು ಪೋಷಕರ ಮಹಾಸಭೆಯನ್ನು ಮಾಡುತ್ತಾ ಬಂದಿರಲಿಲ್ಲ ಈ ವರ್ಷದಿಂದ ನಮ್ಮ ಸರ್ಕಾರ ಈ ಮಹಾಸಭೆಯನ್ನು ಆಯೋಜಿಸಿದೆ.
ಖಾಸಗಿ ಶಾಲೆಗಳು ಪ್ರತಿ ತಿಂಗಳು ಪೋಷಕರ ಸಭೆಯನ್ನು ನಡೆಸಿ ಶಿಕ್ಷಕರು ಮತ್ತು ಪೋಷಕರ ನಡುವೆ ಚರ್ಚೆ ನಡೆದು ಮಕ್ಕಳ ಭವಿಷ್ಯದ ಶಿಕ್ಷಣ ಕುರಿತು ಚರ್ಚೆ ನಡೆಸಿ ಉತ್ತಮ ಶಿಕ್ಷಣ ನೀಡಲು ಅನುಕೂಲ ಕರ ವಾತಾವರಣ ಮಾಡಿಕೊಡಲಾಗುತ್ತಿದೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ವಿರಳ. ಗ್ರಾಮೀಣ ಪ್ರದೇಶದ ಮಕ್ಕಳ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿ ಕೈ ತೊಳೆದುಕೊಳ್ಳುತ್ತಾರೆ. ಮಕ್ಕಳ ಓದಿನ ಬಗ್ಗೆ ಯಾವುದೇ ಕಾಳಜಿ ವಹಿಸುವುದಿಲ್ಲ. ಏಕೆಂದರೆ ಸಂಸಾರದ ಜಂಜಾಟದಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದನ್ನು ಮನಗಂಡ ಸರ್ಕಾರ ಈ ಕಾರ್ಯಕ್ರಮವನ್ನು ರೂಪಿಸಿದೆ. ಈ ಅಮೂಲ್ಯವಾದ ಕಾರ್ಯಕ್ರಮದಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕುಂತೂರು ರಾಜೇಂದ್ರ ತಿಳಿಸಿದರು.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜೊತೆ ಪೋಷಕರ ಪಾತ್ರ ಬಹಳ ಇದೆ. ಏಕೆಂದರೆ ಶಿಕ್ಷಕರು ನೂರು ಮಕ್ಕಳನ್ನು ನೋಡಿಕೊಳ್ಳಬೇಕು ಆದರೆ ಪೋಷಕರು ತಮ್ಮ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಶಿಕ್ಷಕರ ಜೊತೆ ಕೈಜೋಡಿಸಿ ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಾಳಜಿ ವಹಿಸಿದರೆ ಮಕ್ಕಳ ಭವಿಷ್ಯ ಹಸನಾಗಲಿದೆ. ಆದ್ದರಿಂದ ಪೋಷಕರು ಈ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಭವಿಷ್ಯದ ಬಗ್ಗೆ ಏನು ಸಲಹೆ ನಿರ್ದೇಶನಗಳನ್ನು ನೀಡುತ್ತಾರೋ ಅದನ್ನು ಪಾಲಿಸುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳೇ ನಿಮ್ಮ ಅನುಕೂಲಕ್ಕಾಗಿ ವಿದ್ಯಾಶ್ರೀ ಬಿಸಿ ಊಟದಂತ ಕಾರ್ಯಕ್ರಮಗಳು ಅನುಕೂಲವಾಗಲಿದೆ ಇವುಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಸಾಧನೆ ಮಾಡಿ ಎಂದು ಸಲಹೆ ನೀಡಿದರು
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ತಾ.ಪಂ ಇ.ಒ ಗುರುಶಾಂತಪ್ಪ ಬೆಳ್ಳುಂಡಗಿಯವರು ಮಾತನಾಡಿ, ಒಂದು ಮಗುವಿನ ಉತ್ತಮ ಬೆಳವಣಿಗೆಗೆ ಪೋಷಕರು ಹಾಗೂ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಉನ್ನತ್ತ ಶಿಕ್ಷಣ ಪಡೆಯುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾ.ಪಂ ವತಿಯಿಂದ 150 ಚೇರ್ ಗಳನ್ನು ಮುಂದಿನ ತಿಂಗಳು ಕೊಡಿಸುತ್ತೇನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅಂಗವಿಕಲ ವಿದ್ಯಾರ್ಥಿಗಳಿಗಾಗಿ ಶೌಚಾಲಯ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.
ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಹಾಗೂ ಹೆಚ್ಚಿನ ಹಾಜರಾತಿ ಪಡೆದಿರುವ ಮಕ್ಕಳನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಇಒ ಮಂಜುಳಾ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹರ್ಷ, ಪ್ರಾಂಶುಪಾಲರಾದ ಡಾ.ಮಂಗಳಮೂರ್ತಿ, ಉಪಪ್ರಾಂಶುಪಾಲ ವಿಶ್ವನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಡಯಟ್ ಉಪನ್ಯಾಸಕಿ ಕಾತ್ಯಾಯಿನಿ, ಪ್ರೌಢಶಾಲಾ ವಿಭಾಗ ಎಸ್.ಡಿ.ಎಂ.ಸಿ ಅಧ್ಯಕ್ಷೆ ಪವಿತ್ರ ಮತ್ತಿತರರು ಉಪಸ್ಥಿತರಿದ್ದರು.
