(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ಸಾಮಾನ್ಯ ಜನರಿಗೆ ನರಕಸಭೆಯಾಗಿದ್ದು ಕೆಲವು ವ್ಯಕ್ತಿಗಳಿಗೆ ಎಟಿಎಂ ಆಗಿದೆ ಎಂದು
ಚಾಮರಾಜನಗರ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶೇಖರ್ ಎಂ. ಬುದ್ಧ ಶಂಕನಪುರ ಆರೋಪಿಸಿದ್ದಾರೆ.
ಇದನ್ನೆಲ್ಲ ಖಂಡಿಸಿ ಮುಂದಿನ ದಿನಗಳಲ್ಲಿ ನಗರಸಭೆ ಹಾಗೂ ಸ್ಥಳೀಯ ರಾಜಕಾರಣಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ಸುದ್ದಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ ಅವರು ಕೊಳ್ಳೇಗಾಲ ನಗರಸಭೆಯಲ್ಲಿ ಬಿ. ಖಾತಾ ವ್ಯವಸ್ಥೆ ಸಾರ್ವಜನಿಕರಿಗೆ ಉಪಯೋಗವಾಗುವ ಬದಲು ಮಾರಕವಾಗಿ ಮಾರ್ಟಟ್ಟು ಕೆಲವು ಅಧಿಕಾರಿಗಳು ಹಾಗೂ ಕೆಲವೇ ವ್ಯಕ್ತಿಗಳಿಗೆ ಎ.ಟಿ.ಎಂ. ಆಗಿರುವುದು ವಿಷಾಧನೀಯ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಮಾರ್ಚ್ 2025 ರಿಂದ ಅಧಿಸೂಚನೆ ಹೊರಡಿಸಿ ಬಿ ಖಾತೆಗೆ ಅರ್ಜಿ ಪಡೆಯಲು ಪ್ರಾರಂಭಿಸಿ ಜೂನ್ ತಿಂಗಳಿನಿಂದ ಬಿ. ಖಾತೆ ಮಾಡಲು ಪ್ರಾರಂಬಿಸಿದೆ.ಆದರೆ ನಗರಸಭೆಯ ಅಧಿಕಾರಿಗಳು ಸರ್ಕಾರದ ಎಲ್ಲಾ ನಿಬಂಧನೆಗಳನ್ನು ಗಾಳಿಗೆ ತೂರಿ ಮನಸೋ ಇಚ್ಚೆ ಕೆಲಸ ಮಾಡಿ ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ದುರಂತವೆಂದರೆ ಈ ಭ್ರಷ್ಟಾಚಾರಕ್ಕೆ ಸ್ಥಳೀಯ ರಾಜರಾಕರಣಿಗಳೆ ಬೆನ್ನೆಲುಬಾಗಿದ್ದಾರೆ. ನಮಗೆ ಈ ರಾಜಕಾರಣಿಗಳೆ ಪಾಲುದಾರ ರಾಗಿರಬಹುದೆಂಬ ಸಂಶಯ ಕಾಡುತ್ತಿದೆ ಎಂದು ಹೇಳಿದರು.
ನಗರಸಭೆ ವ್ಯಾಪ್ತಿಯಲ್ಲಿ 1987-88 ಮತ್ತು 2002-03 ನೇ ಸಾಲಿನಲ್ಲಿ ಸಮಗ್ರ ಪಟ್ಟಣಾಭಿವೃದ್ಧಿ ಮತ್ತು ಐ.ಡಿ.ಎಸ್.ಎಂ.ಟಿ. ಯೋಜನೆಯಡಿ ನಿರ್ಮಿಸಿರುವ ವಾಣಿಜ್ಯ ಮಳಿಗಳನ್ನು ಗುತ್ತಿಗೆ ಆದಾರದ ಮೇಲೆ ವಿತರಿಸುವಾಗ ಸರ್ಕಾರ ಸುತ್ತೋಲೆ ಸಂಖ್ಯೆ ನ.ಆ.ಇ.228 ಜಿ.ಇ.ಎಲ್/2000 ದಿನಾಂಕ 20-09-2000 ನೇ ಸಾಲಿನ ಆದೇಶ ಪಾಲಿಸದೆ ಎಸ್.ಸಿ/ಎಸ್.ಟಿ ಮತ್ತು ಒ.ಬಿ.ಸಿ ಗಳಿಗೆ ವಂಚಿಸಿರುವದನ್ನು ಪ್ರಶ್ನಿಸಿ ನಗರಸದೆ ವಿರುದ್ಧ ಪ್ರಗತಿಪರ ವೇದಿಕೆ 18-12-2013 ರಲ್ಲಿ ಹೋರಾಟ ರೂಪಿಸಿ ಕಾನೂನು ಹೋರಾಟಕ್ಕೆ ಮುಂದಾಗಿ, ಪ್ರಕರಣವನ್ನು ನ್ಯಾಯಾಲಯಕ್ಕೆ ಹೋಗುವಂತೆ ಒತ್ತಡ ಹಾಕಿತ್ತು.
ಸುಮಾರು 12-13 ವರ್ಷಗಳಿಂದ ನಗರಸಭೆ ಒಬ್ಬ ನೌಕರ ಹಾಗೂ ಒಂದಿಬ್ಬರು ಸದಸ್ಯರು, ನಗರಸಭೆಯ ಕಾನೂನು ಸಲಹೆಗಾರರು ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ಒದಗಿಸದ ಕಾರಣ ಇಂದಿಗೂ ಕೂಡ ಶೋಷಿತ ವರ್ಗಕ್ಕೆ ಅನ್ಯಾಯವಾಗುತ್ತಿದೆ. ಹಾಗಾಗಿ ಇಲ್ಲಿನ ಶಾಸಕರು ಮದ್ಯ ಪ್ರವೇಶಿಸಿ ಎಸ್.ಸಿ/ಎಸ್.ಟಿ ಮತ್ತು ಒ.ಬಿ.ಸಿ ಸಮುದಾಯಗಳಿಗೆ ನ್ಯಾಯ ಒದಗಿಸಬೇಕೆಂದು ಶೇಖರ್ ಎಂ. ಬುದ್ಧ ಶಂಕನಪುರ ಮನವಿ ಮಾಡಿದರು.
ಪಟ್ಟಣದ ಸಮಗ್ರ ಒಳಚರಂಡಿ ವ್ಯವಸ್ಥೆಗೆ 2007-08 ನೇ ಸಾಲಿನಲ್ಲಿ ಮಾಜಿ ಶಾಸಕ ಎಸ್. ಬಾಲರಾಜು ಅವರ ಅವಧಿಯಲ್ಲಿ ಸರ್ಕಾರದ ಡಿ.ಪಿ.ಆರ್. ತಯಾರಿಸಿ ಅನುಮೋದನೆಯಾಗಿ ನಂತರ ಬಂದ ಎಸ್. ಜಯಣ್ಣರವರ 2015-16 ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತು 95 ಕೋಟಿ ರೂ ಮಂಜೂರಾದರೂ ಕಾಮಗಾರಿಯಾಗದೆ ಜನರು ಇವತ್ತಿಗೂ ಶಂಕನಪುರ, ಅಣಗಳ್ಳಿ, ಕೊಳ್ಳೇಗಾಲ ಮೋಳೆಯಲ್ಲಿ ನಗರಕಯಾತನೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಕೊಳ್ಳೇಗಾಲ ಪಟ್ಟಣದ ಹೃದಯ ಭಾಗದಲ್ಲಿರುವ ಸರ್‌ಕರ್ಟನ್ ಕಾಲುವೆ ಕಾಮಗಾರಿಗೆ 2015-16ನೇ ಸಾಲಿನಲ್ಲಿ 23 ಕೋಟಿ ರೂ ಬಿಡುಗಡೆಯಾಗಿದ್ದರೂ ಕಾಮಗಾರಿ ಪೂರ್ಣವಾಗದೆ ಕಾಲುವೆ ಗಬ್ಬುನಾರುತ್ತಿವೆ. ಇದರಿಂದ ಪಟ್ಟಣದ ಜನ ರೋಗರುಜನಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಒಟ್ಟು 21 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಈ ಘಟಕಗಳಲ್ಲಿ ಈಗಾಗಲೇ ಸುಮಾರು 1.5 ಕೋಟಿ ರೂ ಅವ್ಯವಹಾರವಾಗಿದೆ, ಈ ಸಂಬಂದ ತನಿಖೆಯಾಗಿ ಕೆಲವರ ವಿರುದ್ದ ಕ್ರಿಮಿನಲ್ ಮೊಕ್ಕದ್ದಮೆ ದಾಖಲಾಗಿದ್ದರೂ ಎಚ್ಚೆತ್ತುಕೊಳ್ಳದೆ ನಗರಸಭೆಯ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಆದಿಕಾರಿಗಳ ಬೇಜವಾಬ್ದಾರಿಗೆ ಪಟ್ಟಣದಲ್ಲಿ ಕೇವಲ ಒಂದೇ ಬಂದು ಚಾಲ್ತಿಯಲ್ಲಿದ್ದು ಉಳಿದ 20 ಯಂತ್ರಗಳು ಕೆಟ್ಟು ನಿಂತಿವೆ ಇದರಿಂದ ಪಟ್ಟಣದ ಜನರಿಗೆ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ ಎಂದು ಹೇಳಿದರು.
ಇನ್ನೂ ಹಲವಾರು ಸಮಸ್ಯೆ ಗಳಿದ್ದರೂ ನಗರಸಭೆ ಅಧ್ಯಕ್ಷರಾಗಲಿ, ಸದಸ್ಯರುಗಳಾಗಲಿ,ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ, ನಗರಸಭಾ ಅಧ್ಯಕ್ಷರು ಕೇವಲ ಕಡತಗಳಿಗೆ ಸಹಿ ಹಾಕುವುದು ಶಾಸಕರ ಪರ ಪತ್ರಿಕಾಗೋಷ್ಟಿ ಮಾಡುವುದೇ ತಮ್ನ ಜವಾಬ್ದಾರಿ ಎಂಬ ಗುಂಗಿನಲ್ಲಿದ್ದಾರೆ, ಎರಡು ಬಾರಿ ಅಧ್ಯಕ್ಷರಾಗಿದ್ದರೂ ಸಹ ಒಂದು ಬಾರಿಯೂ ಜನ ಸಂಪರ್ಕ ಸಭೆ ಕರೆದು ಸಾರ್ವಜನಕ ಸಮಸ್ಯೆಗಳನ್ನು ಕೇಳದೇ ಪಟ್ಟಣದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೊಳ್ಳೇಗಾಲ ನಗರಸಭೆ ಅಭಿವೃದ್ಧಿಯಲ್ಲಿ ಕುಂಠಿತವಾಗಿರುವುದಕ್ಕೆ ಈ ಅಧ್ಯಕ್ಷರ ಕೊಡುಗೆಯೇ ಜಾಸ್ತಿ ಎಂದು ತಿಳಿಸಿದರು.
ಕೊಳ್ಳೇಗಾಲ ನಗರಸಭೆಯಲ್ಲಿ ಕೆಲವೊಮ್ಮೆ ಸದಸ್ಯರುಗಳ ನಡುವೆ ಕಿತ್ತಾಟ, ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಕಿತ್ತಾಟ, ಕೆಲವೊಮ್ಮೆ ಸಾರ್ವಜನಿಕರ ಅಸಹನೆ ಕಟ್ಟೆ ಒಡೆದು ಹೋರಾಟಗಳೂ ನಡೆದಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಶಾಸಕ ಎ.ಆರ್. ಕೃಷ್ಣಮೂರ್ತಿ ಯವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸಮಸ್ಯೆಗಳನ್ನು ಪರಿಹರಿಸದೆ ನಾಮಕಾವಸ್ಥೆಗೆ ಸಭೆ ನಡೆಸಿ ಕೈ ಚೆಲ್ಲಿ ಕುಳಿತಿರುವುದು ಖಂಡನೀಯ ಎಂದು ಹೇಳಿದರು.
ಒಟ್ಟಾರೆ ಕೊಳ್ಳೇಗಾಲ ನಗರಸಭೆ ಸಮಸ್ಯೆಗಳ ಸಾಗರವಾಗಿದ್ದು ಸಾರ್ವಜನಿಕರ ಪಾಲಿಗೆ ನರಕವಾಗಿದೆ, ನಗರಸಭೆಯ ಸಮಸ್ಯೆಗಳನ್ನು ಆದ್ಯತೆ ಮೇಲೆ ಒಂದು ವಾರದೊಳಗೆ ಸಂಬಂದಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕಾರಣಿಗಳು ಪರಿಹರಿಸದಿದ್ದಲ್ಲಿ ನಗರಸಭೆಯ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಆದಿಕಾರಿಗಳು, ಸ್ಥಳೀಯ ರಾಜಕಾರಣಿಗಳ ವಿರುದ್ದ ಸಂವಿಧಾನ ಚೌಕಟ್ಟಿನಲ್ಲಿ ಹೋರಾಟ ರೂಪಿಸಿ ನ್ಯಾಯ ಪಡೆದು ಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಪ್ರಗತಿಪರ ಸಂಘಟನೆಯ ಒಕ್ಕೂಟದ ಪರವಾಗಿ ಶೇಖರ್ ಎಂ. ಬುದ್ಧ ಶಂಕನಪುರ ಎಚ್ಚರಿಸಿದರು.