ಕೊಳ್ಳೇಗಾಲ: ಜಮೀನು ವಿಚಾರಕ್ಕೆ ವ್ಯಕ್ತಿಯ ತಲೆಗೆ ಗೂಟದಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗೆ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹನೂರು ತಾಲ್ಲೂಕಿನ ಜಿ.ಕೆ.ಹೊಸೂರು ಗ್ರಾಮದ ಆರೋಪಿ ರವಿ ಶಿಕ್ಷೆಗೊಳ್ಳಲಾದ ಕೊಲೆ ಆರೋಪಿ.
ಕಳೆದ 2022 ರ ಮಾ.23 ರಂದು ಅದೇ ಗ್ರಾಮದ ತನ್ನ ಸಂಬಂಧಿ ಮನೋಜ್ ಎಂಬಾತನನ್ನು ಜಮೀನಿನ ವಿಚಾರಕ್ಕೆ ಈತ ಕೊಲೆ ಮಾಡಿದ್ದ.
ಮೃತನ ತಾಯಿ ಚಿಕ್ಕಮಣಿ ಕುಟುಂಬದವರಿಗೂ ಪಿತ್ರಾರ್ಜಿತವಾಗಿ ಬಂದ ಜಮೀನಿಗೆ ಸಂಬಂಧಿಸಿದಂತೆ ಭಾಗಾಂಶದ ವಿಚಾರದಲ್ಲಿ ವೈಮನಸ್ಸಿದ್ದು ಜಿ.ಕೆ.ಹೊಸೂರು ಗ್ರಾಮದ ಸರ್ವೆ ನಂ.183/ಸಿ & 183/14 ಸಂಬಂಧಿಸಿದಂತೆ ಆರೋಪಿ ರವಿ ಮತ್ತು ಚಿಕ್ಕಮಣಿ ನಡುವೆ ಜಮೀನಿನ ಸ್ವಾಧೀನತೆ ಬಗ್ಗೆ ತಕರಾರಿತ್ತು.
ಈ ವಿಚಾರಕ್ಕೆ ಕಳೆದ 2022 ರ ಮಾ.23 ರಂದು ರವಿ ಸರ್ವೆ ಮಾಡಿಸಿದ್ದು ಸರ್ವೆಯಲ್ಲಿ ಗಡಿ ಗುರುತುಗಳನ್ನು ತೋರಿಸಿದ್ದರೂ ರವಿ ಅದಕ್ಕೆ ಒಪ್ಪದೆ ಒತ್ತುವರಿ ಮಾಡಿಕೊಂಡಿದ್ದ.
ಸಂಜೆ 4 ಗಂಟೆ ಸಮಯದಲ್ಲಕ 1ನೇ ಆರೋಪಿ ಸರ್ವೆ 183/1ನ್ನು ಉಳುಮೆ ಮಾಡಿಸುತ್ತಿದ್ದಾಗ ಮೃತ ಮನೋಜ್ ಮತ್ತು ಆತನ ತಾಯಿ ಚಿಕ್ಕಮಣಿ ಜಮೀನಿನ ಬಳಿ ಹೋಗಿ ತಡೆದಿದ್ದಾರೆ.
ಆಗ ಆರೋಪಿಗಳಾದ ರವಿ, ಶ್ರೀಕಂಠಮೂರ್ತಿ,ಗಿರೀಶ, ಶಶಿಕಲಾ, ಮಹೇಶ, ಮಾದೇವಪ್ಪ ಇವರುಗಳು ಗುಂಪು ಕಟ್ಟಿಕೊಂಡು 1ನೇ ಆರೋಪಿ ರವಿಯು ಮನೋಜನ ಕುತ್ತಿಗೆ ಪಟ್ಟಿ ಹಿಡಿದು ಅವನನ್ನು ಕೊಲ್ಲುವ ಉದ್ದೇಶದಿಂದ ಅಲ್ಲಿ ಬಿದ್ದಿದ್ದ ಗೂಟದ ದೊಣ್ಣೆಯನ್ನು ತೆಗೆದುಕೊಂಡು ಮನೋಜನ ತಲೆಯ ಮೇಲೆ 3-4 ಬಾರಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ತಕ್ಷಣ ಮನೋಜ್ ರಕ್ತಸಿಕ್ತವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಆತನನ್ನು ಹೋಲಿಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಆತ ಮೃತಪಟ್ಟಿದ್ದ.
ಈ ಸಂಬಂಧ ಮೃತನ ತಾಯಿ ಚಿಕ್ಕಮಣಿ ಅವರು ಹನೂರು ಠಾಣೆಗೆ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅಂದಿನ ಪಿಐ ಸಂತೋಷ್ ಕಶ್ಯಪ್ ಅವರು, ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಅಂತಿಮ ವರದಿಯನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಕೊಲೆ ಮಾಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿರುವುದರಿಂದ 1ನೇ ಆರೋಪಿ ರವಿಗೆ ಜೀವಾವಧಿ ಕಠಿಣ ಶಿಕ್ಷೆ ಮತ್ತು 5000 ರೂ. ದಂಡ ಪಾವತಿಸುವಂತೆ ಶಿಕ್ಷೆ ವಿಧಿಸಿ ಉಳಿದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.
ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಟಿ. ಸಿ. ಶ್ರೀಕಾಂತ್ ರವರು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ಪಿ. ಮಂಜುನಾಥ್, ಸಿ.ಬಿ. ಗಿರೀಶ್ ವಿಚಾರಣೆ ನಡೆಸಿ ದಾದ ಮಂಡಿಸಿದ್ದರು.