(ವರದಿ:ಸಿದ್ದರಾಜು ಕೊಳ್ಳೇಗಾಲ)
ಕೊಳ್ಳೇಗಾಲ: ಕ್ಷುಲ್ಲಕ ಕಾರಣಕ್ಕೆ ಗೃಹಿಣಿಯೊಬ್ಬರು ತನ್ನ ಎರಡು ಮಕ್ಕಳೊಡನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲೆ ಮಾದೇಶ್ವರ ಬೆಟ್ಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಕೂಗಳತೆ ದೂರದಲ್ಲಿರುವ ಕಾಡುಹೊಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೇಡಗಂಪನ ಜನಾಂಗದ ಮಾದೇಶ ಎಂಬುವರ ಪತ್ನಿ ಸುಶೀಲಾ (35) ಮಕ್ಕಳಾದ ಚಂದ್ರು 3ನೇ ತರಗತಿ(9), ದಿವ್ಯ 6 ನೇ ತರಗತಿ (11), ಮೃತ ದುರ್ದೈವಿಗಳು.
ಗ್ರಾಮದ ಈರಣ್ಣ ಎಂಬುವರ ಮಗಳಾದ ಸುಶೀಲಾಳನ್ನು ಕಳೆದ 15 ವರ್ಷಗಳ ಹಿಂದೆ ಅದೇ ಗ್ರಾಮದ ಮಾದೇಶ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ದಂಪತಿಗಳಿಗೆ ಒಂದು ಹೆಣ್ಣು ಒಂದು ಗಂಡು ಇಬ್ಬರು ಮಕ್ಕಳಿದ್ದರು. ಮೃತಳ ಸಹೋದರ ಮನೆಗೆ ಬಂದು ಹಣ ಮತ್ತು ಮೊಬೈಲ್ ತೆಗೆದುಕೊಂಡು ಹೋಗಿದ್ದ. ಈ ವಿಚಾರವಾಗಿ ಮಾದೇಶ ಹೆಂಡತಿಯನ್ನು ಪ್ರಶ್ನಿಸಿದ್ದಾನೆ.
ಈ ವೇಳೆ ಮಾತಿಗೆ ಮಾತು ಬೆಳೆದು ದಂಪತಿಗಳಿಬ್ಬರು ಜಗಳ ಮಾಡಿದ್ದಾರೆ. ಇದರಿಂದ ಮನನೊಂದ ಸುಶೀಲ ತನ್ನೆರಡು ಮಕ್ಕಳಾದ ಚಂದ್ರು ಹಾಗೂ ದಿವ್ಯಾಳನ್ನು ಕರೆದುಕೊಂಡು ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ರಂಗ ಮಾದಯ್ಯ ಎಂಬುವರ ತೋಟದ ಜಮೀನಿನಲ್ಲಿರುವ ತೆರೆದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದರೆ ಹಣದ ವಿಚಾರವಾಗಿ ಆಗಾಗ ನನ್ನ ಮಗಳ ಮೇಲೆ ಗಲಾಟೆ ಮಾಡುತ್ತಿದ್ದ ಅಳಿಯ ನನ್ನ ಮಗಳು ಹಾಗೂ ಮೊಮ್ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಮೃತಳ ತಂದೆ ಈರಣ್ಣ ಮಲೆ ಮಾದೇಶ್ವರ ಬೆಟ್ಟ ಠಾಣೆಗೆ ದೂರು ನೀಡಿದ್ದಾರೆ.
ಈರಣ್ಣ ನೀಡಿದ ದೂರಿನ ಮೇರೆಗೆ ಮ.ಮ. ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಹೊರ ತೆಗೆಸಿ ಪಂಚನಾಮೆ ನಡೆಸಿ ವಾರಸುದಾರರಿಗೆ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.