(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ,ಏ.7: ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯನವರು ಪ್ರಮುಖರು, ಮಾನವ ಕುಲದ ಬಗ್ಗೆ ಚಿಂತಿಸಿದ್ದ ಮಹಾನ್ ಸಂತರು ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟರು.
ಪಟ್ಟಣದ ಬಳೇಪೇಟೆಯಲ್ಲಿ ಶ್ರಿ ಬಲಿಜಿಗ ಕುಲಬಾಂದವರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಕೈವಾರ ತಾತಯ್ಯನವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನಗೆ ಕೈವಾರ ತಾತಯ್ಯನವರ ಬಗ್ಗೆ ಅಷ್ಟೊಂದು ತಿಳಿದಿಲ್ಲ. ಇಂದು ತಂತ್ರಜ್ಞಾನ ಬಹಳ ಮುಂದುವರೆದಿದೆ ಮೊಬೈಲ್ ನಲ್ಲಿ ಆಪ್ ಓಪನ್ ಮಾಡಿದರೆ ಗೂಗಲ್ ನಲ್ಲಿ ಎಂತಹ ಇತಿಹಾಸವನ್ನಾದರೂ ತಿಳಿದುಕೊಳ್ಳಬಹುದು, ನಾನು ಕೂಡ ಗೂಗಲ್ ಮುಖಾಂತರ ಸಾಕಷ್ಟು ವಿಚಾರಗಳನ್ನು ತಿಳಿದು ನಿಮ್ಮ ಮುಂದೆ ಪ್ರಚುರಪಡಿಸುತ್ತಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳಿದರು.
ಅಲ್ಲಿ ವ್ಯಕ್ತವಾಗಿರುವಂತೆ ನಮ್ಮ ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯನವರು ಕೂಡ ಪ್ರಮುಖರು. ಅವರು ಮಾನವ ಕುಲದ ಬಗ್ಗೆ ಚಿಂತಿಸಿದ್ದ ಮಹಾನ್ ಸಂತರು ಪ್ರಕೃತಿಯ ಅವಿಭಾಜ್ಯ ಅಂಗವಾದ ಮಾನವನ ಪ್ರತಿ ಕೃತಿಯನ್ನು ಪೂಜಿಸಬೇಕು ಸ್ವೇಚ್ಛಾಚಾರಕ್ಕೆ ಬಳಸಿಕೊಂಡರೆ ಆಗಬಹುದಾದ ಅನಾಹುತಗಳನ್ನು ಆಡು ಭಾಷೆಯಲ್ಲಿ ಕಟ್ಟಿಕೊಟ್ಟ ಭವಿಷ್ಯವಾಣಿ ಅತ್ಯಂತ ಮಹತ್ವವಾದದ್ದು. ಅಂದರೆ ಒಳಿತನ್ನು ಮಾಡಿ ಒಳಿತನ್ನು ಪಡೆ ಎಂಬ ಅಂಶ ಇಲ್ಲಿ ಅಡಕವಾಗಿರುವುದನ್ನು ನಾವು ಕಾಣಬಹುದು ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಯ ಪ್ರಮುಖರಾದ ಎಂ ಎಸ್ ರಾಮಯ್ಯ ಅವರು ಈ ಸಮಾಜದವರು, ಹಾಗೆಯೇ ಮಾಜಿ ಸಚಿವರಾದ ಸೀತಾರಾಮಯ್ಯರವರು ನನಗೆ ಚುನಾವಣೆಯಲ್ಲಿ ಸಿದ್ದರಾಮಯ್ಯರವರೊಡಗುಡಿ ಸಾಕಷ್ಟು ಸಹಾಯ ಮಾಡಿದ್ದಾರೆ, ಪಿ ಸಿ ಮೋಹನ್ ಅವರು ಹಾಗೂ ನಾನು ಸಹಪಾಠಿಗಳು 1994ರಲ್ಲಿ ಅವರು ನನ್ನೊಡನೆ ಶಾಸಕರಾಗಿದ್ದರು ಎಂದು ಸ್ಮರಿಸಿದರು. ಪ್ರಾರಂಭದಲ್ಲಿ ಕೊಳ್ಳೇಗಾಲದಲ್ಲಿ ಕೆಲವೇ ಕೆಲವು ಕುಟುಂಬಗಳಿದ್ದ ಈ ಸಮಾಜ ಈಗ ಸಾಕಷ್ಟು ಬೆಳವಣಿಗೆಯಾಗಿರುವಂತಹದ್ದನ್ನು ನಾವು ಕಾಣುತ್ತೇವೆ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದಲ್ಲಿ ನಾರಾಯಣಪ್ಪ ನವರಾಗಿ ಜನಿಸಿದ ತಾತಯ್ಯರವರು ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯರನ್ನು ಕಳೆದುಕೊಂಡು 50 ವರ್ಷ ಬಲಿಜ ಜನಾಂಗದ ಕುಲಕಸುಬಾದ ಬಳೆ ಹಾಗೂ ಮುತ್ತೈದೆಯರ ಸಾಮಾನುಗಳನ್ನು ವ್ಯಾಪಾರ ಮಾಡುತ್ತಾ ಬದುಕಿದ್ದವರು. ನಾರಾಯಣಪ್ಪ ರವರು ಲೌಕಿಕ ಜೀವನದಿಂದ ಬೇಸತ್ತು ಕೈವಾರದಲ್ಲಿರುವ ನರಸಿಂಹಸ್ವಾಮಿ ಗುಹೆಯಲ್ಲಿ ಒಂಬತ್ತು ವರ್ಷ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದು ಅಪಾರ ಜ್ಞಾನವನ್ನು ಸಂಪಾದಿಸಿದವರು. ಯೋಗಿಗಳಾಗಿ ನಾರಾಯಣಪ್ಪ ಅವರು ಕಾಲಜ್ಞಾನಿಗಳಾಗಿ ಕೀರ್ತನೆ ಮತ್ತು ತತ್ವಪದಗಳಿಂದ ಖ್ಯಾತರಾಗಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾವಿರಾರು ತತ್ವಪದಗಳನ್ನು ರಚಿಸಿದ್ದಾರೆ ಎಂದು ಕೃಷ್ಣಮೂರ್ತಿ ತಿಳಿಸಿದರು.
ನಮ್ಮದು ಹಿಂದೂ ಸಂಪ್ರದಾಯ. ಧಾರ್ಮಿಕವಾಗಿ ಅನೇಕ ದೇವರುಗಳನ್ನು ಪೂಜಿಸುತ್ತೇವೆ. ಅದಕ್ಕಾಗಿ ಒಂದು ದೇವಾಲಯ ನಿರ್ಮಾಣ ವಾಗಬೇಕು ಎಂದು ಜಾಗ ಕೇಳಿದ್ದೀರಿ, ನಗರ ಪ್ರದೇಶದಲ್ಲಿ ಜಾಗ ಸಿಗುವುದಿಲ್ಲ ಆದ್ದರಿಂದ ನಿಮ್ಮಲ್ಲಿ ಯಾವುದಾದರೂ ಪುರಾತನ ದೇವಾಲಯವಿದ್ದರೆ ತಿಳಿಸಿ ಅದನ್ನೇ ಜೀರ್ಣೋದ್ಧಾರ ಮಾಡಲು ನನ್ನ ಸಹಕಾರ ಇರುತ್ತದೆ ಎಂದು ಹೇಳಿದ್ದೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸವಾಗಬೇಕಾದರೆ ನನ್ನ ಇತಿ ಮಿತಿಯೊಳಗೆ ಸ್ಪಂದಿಸಿ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತೇನೆ. ಸಮಾಜದ ಅಭಿವೃದ್ಧಿಗೆ ನೀವು ಒಂದಾಗಿ ಎಂದು ಬಲಿಜ ಸಮುದಾಯಕ್ಕೆ ಕರೆ ನೀಡಿದರು.
ಬಹಳಷ್ಟು ರಾಜಕಾರಣಿಗಳು ಸಣ್ಣ ಪುಟ್ಟ ಸಮುದಾಯಗಳು ಕರೆದರೆ ಕಾರ್ಯಕ್ರಮಗಳಿಗೆ ಬರುವುದಿಲ್ಲ ಆದರೆ ನಾನು ನಿಮ್ಮ ಕರೆಗೆ ಓಗೊಟ್ಟು ಬಂದಿದ್ದೇನೆ ಎಂದು ಶಾಸಕರು ಹೇಳಿದರು.
ಈ ವೇಳೆ ಶಾಸಕ ಕೃಷ್ಣಮೂರ್ತಿ ಅವರನ್ನು ಬಲಿಜ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕೈವಾರ ತಾತಯ್ಯನವರ ಬಗ್ಗೆ ಮಹೇಶ್ ಮಾತನಾಡಿದರು
ಸಮಾರಂಭದಲ್ಲಿ ಬಲಿಜಗ ಕುಲಬಾಂಧವರ ಸಂಘದ ಅಧ್ಯಕ್ಷ ಉದಯ ಕುಮಾರ್, ಸಿಟಿ ಪ್ಯಾಶನ್ ಮಹೇಶ್, ಹನೂರು ಮುಖಂಡ ವೆಂಕಟೇಶ್, ಸಂಸದ ಜಗದೀಶ್ ಶೆಟ್ಟರ್ ಆಪ್ತ ಸಹಾಯಕ ಗಿರೀಶ್ ಬಾಬು, ನಗರಸಭೆ ಸದಸ್ಯ ಪರಮೇಶ್ವರಯ್ಯ, ಬಿಜೆಪಿ ಮುಖಂಡ ಚಿಕ್ಕಲಿಂಗೆಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್ ಮತ್ತಿತರರು ಉಪಸ್ಥಿತರಿದ್ದರು.