(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೆಗಾಲ: ತಾಲ್ಲೂಕಿನ ಕಾಮಗೆರೆ ಗ್ರಾಮದ ಆದಿಜಾಂಬವ ಸಮುದಾಯ ಭವನದಲ್ಲಿ ಅಡುಗೆ ಮನೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.
2023/24 ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಡಿ 10 ಲಕ್ಷ.ರೂ ವೆಚ್ಚದಲ್ಲಿ ಅಡುಗೆ ಮನೆ ನಿರ್ಮಾಣ ಮಾಡಲಾಗುತ್ತಿದೆ.
ಈ ವೇಳೆ ಮಾತನಾಡಿದ ಶಾಸಕರು, ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿ ಆದಷ್ಟು ಬೇಗ ಪೂರ್ಣಗೊಳಿಸಿ ಜನರ ಸೇವೆಗೆ ಸಿದ್ದ ಮಾಡಿಕೊಡಬೇಕೆಂದು ತಿಳಿಸಿದರು.
ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ನಿರ್ಮಿತಿ ಕೇಂದ್ರದ ಕಿರಿಯ ಅಭಿಯಂತರ ರವಿ ಅವರಿಗೆ ಮಂಜುನಾಥ್ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಲಿಂಗರಾಜು, ರಾಜಣ್ಣ, ಶಿವು, ಚಿಕ್ಕಸ್ವಾಮಿ, ಸಿಂಗಾನಲ್ಲೂರು ರಾಜಣ್ಣ, ಚಿನ್ನವೆಂಕಟ್, ಗೋವಿಂದ, ಶ್ರೀರಂಗ, ಡಿ.ಕೆ ರಾಜು, ಅಮೀನ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.
ಪಾಳ್ಯದ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ:
ತಾಲ್ಲೂಕಿನ ಪಾಳ್ಯದ ಸಮೀಪದ ಬಹುಗ್ರಾಮ ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೂ ಶಾಸಕ ಎಂ.ಆರ್ ಮಂಜುನಾಥ್ ಬೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶುದ್ಧ ಕುಡಿಯುವ ನೀರಿನ ಘಟಕದ ವಿವಿಧ ಕ್ಲಾರಿ ಪ್ಲೋರಿಟ್, ಫಿಲ್ಟರ್ ಹೌಸ್, ಪಂಪ್ ಹೌಸ್, ಪ್ರಯೋಗಾಲಯ, ಹಾಗೂ ಇನ್ನಿತರ ಭಾಗಗಳಿಗೆ ಶಾಸಕರು ಭೇಟಿ ನೀಡಿ ದಿನನಿತ್ಯದ ನೀರಿನ ಸಂಗ್ರಹಣೆ ಹಾಗೂ ಸಾರ್ವಜನಿಕವಾಗಿ ಯಾವ ಯಾವ ಭಾಗಕ್ಕೆ ಎಷ್ಟೆಷ್ಟು ನೀರು ತಲುಪುತ್ತಿದೆ ಎಂಬುದರ ಬಗ್ಗೆ ಜಲಜೀವನ್ ಮಿಷನ್ (ಜೆಜೆಎಂ) ಸಹಾಯಕ ಕಾರ್ಯಪಾಲಕ ಅಭಿಯಂತರ ಸುಧನ್ವನಾಗ್ ಅವರಿಂದ ಮಾಹಿತಿ ಪಡೆದುಕೊಂಡರು.
ಇಲ್ಲಿ ದಿನನಿತ್ಯ ಬಳಸುವ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ತಾಕೀತು ಮಾಡಿದರು.
ಈ ವೇಳೆ ಪಾಳ್ಯ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್, ಸದಸ್ಯ ಸಿಗಣ್ಣ,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್ ಗೌಡ, ಚಿನ್ನವೆಂಕಟ್ ಶಿವು, ಶ್ರೀರಂಗ, ವಿಜಯ್ ಕುಮಾರ್, ಡಿ.ಕೆ ರಾಜು, ಎಸ್.ಆರ್ ಮಹದೇವ್ ಹಾಗೂ ಮತ್ತಿತರರು ಹಾಜರಿದ್ದರು.

ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಮಂಜುನಾಥ್ ಭೇಟಿ:
ಕೊಳ್ಳೇಗಾಲ, ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮದ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಎಂ. ಆರ್. ಮಂಜುನಾಥ್ ಭೇಟಿ ನೀಡಿ ಅನುಧಾನ ನೀಡುವ ಭರವಸೆ ನೀಡಿದರು.
ಗ್ರಾಮದ ಕೊಳ್ಳೇಗಾಲ-ಹನೂರು ಮುಖ್ಯ ರಸ್ತೆಯ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಗ್ರಾಮಸ್ಥರು ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು ಪ್ರತಿಮೆ ನಿರ್ಮಾಣ ಮಾಡಲು ಶಾಸಕರನ್ನು ಗ್ರಾಮದ ಯಜಮಾನರು ಹಾಗೂ ಯುವಕರು ಅನುದಾನ ನೀಡುವಂತೆ ಮನವಿ ಮಾಡಿದರು.

ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಶಾಸಕರು ಸರಕಾರದಿಂದ ಬರುವ ಅನುದಾನವನ್ನು ಬಳಸಿಕೊಂಡು ಪುತ್ತಳಿ ನಿರ್ಮಾಣ ಮಾಡಿ ವ್ಯಯಕ್ತಿಕವಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜೊತೆಗೆ ಕೊಂಗರಹಳ್ಳಿ ಮಾರ್ಗವಾಗಿ ಗುಂಡಾಲ್ ಜಲಾಶಯಕ್ಕೆ ತೆರಳುವ ರಸ್ತೆ ತೀರಾ ಹಾಳಾಗಿದ್ದನ್ನು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.
ಈ ಮಾರ್ಗವಾಗಿ ದಿನ ನಿತ್ಯ ನೂರಾರು ವಾಹನಗಳು ಚಲಿಸುತ್ತವೆ. ಗುಂಡಾಲ್ ಜಲಾಶಯಕ್ಕೆ ತೆರಳುವ ರಸ್ತೆಯನ್ನು ಮುಂದಿನ ದಿನಗಳಲ್ಲಿ ಸ್ಥಳೀಯರ ಒಪ್ಪಿಗೆಯ ಮೇರೆಗೆ ಅಗಲ ಮಾಡಿ ಅಭಿವೃದ್ಧಿ ಪಡಿಸಲಾಗುವುದು, ಹಾಗೂ ಕೊಂಗರಹಳ್ಳಿ ಗ್ರಾಮದ ಪರಿಶಿಷ್ಟರ ನೂತನ ಬಡಾವಣೆಯಲ್ಲಿ ರಸ್ತೆ ಇಲ್ಲದಿರುವುದನ್ನು ಖುದ್ದಾಗಿ ನಾನೇ ನೋಡಿದ್ದೇನೆ. ಕೆಲವೇ ದಿನಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಿ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ಹುಚ್ಚಯ್ಯ, ಮಂಜೇಶ್, ಅಮೀನ್, ಕೊಂಗರಹಳ್ಳಿ ಗ್ರಾಮದ ಯಜಮಾನರಾದ ಮಹೇಶ್, ಕೃಷ್ಣ, ಶಿವಮಲ್ಲು, ಯುವಕರುಗಳಾದ ಮಹೇಶ್, ಮಹದೇವಸ್ವಾಮಿ, ರಾಜಪ್ಪ, ಮುಖಂಡರುಗಳಾದ ಲಕ್ಷ್ಮಣ, ರಾಜಣ್ಣ ಮುಂತಾದವರು ಹಾಜರಿದ್ದರು.