(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ,ಜು.2: ಕೊಳ್ಳೇಗಾಲದ ಆರ್. ಎಂ.ಸಿ.ರಸ್ತೆಯಲ್ಲಿ ಸರ್ಕಾರಿ ಜಾಗ ವನ್ನು ಒತ್ತುವರಿ ಮಾಡಿಕೊಂಡು ವಾಸದ ಮನೆ ಅಂಗಡಿ, ಮುಂಗಟ್ಟು ನಿರ್ಮಿಸಿದ್ದವರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದರು.
ಇಂದು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಹಸೀಲ್ದಾರ್ ಬಸವರಾಜು ಅವರ ನೇತೃತ್ವದಲ್ಲಿ ಜಂಟಿ ಕಾರ್ಯಚರಣೆ ನಡೆಸಿದದರು.
ಸರ್ವೆ ನಂ.700 ಹಾಗೂ 708 ರಲ್ಲಿರುವ ಸರ್ಕಾರಿ ಜಾಗ ಮರಡಿಗುಡ್ಡವನ್ನು ಕೆಲವರು ಒತ್ತುವರಿ ಮಾಡಿ ವಾಸದ ಮನೆ, ಅಂಗಡಿ ನಿರ್ಮಿಸಿ ಸರ್ಕಾರದ ಎಲ್ಲಾ ಸೌಲಭ್ಯ ವನ್ನು ಪಡೆದುಕೊಂಡು ಕಳೆದ 30 ವರ್ಷಗಳಿಂದ ವಾಸ ಮಾಡುತ್ತಿದ್ದರು.
2023 ರಲ್ಲಿ ಭೀಮನಗರದ ಎಲ್.ನಾಗಣ್ಣ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿ ಅಕ್ರಮ ಒತ್ತುವರಿ ಮಾಡಿಕೊಂಡಿರುವ ಮರಡಿಗುಡ್ಡ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದರು.
ಎಲ್.ನಾಗಣ್ಣನವರ ದೂರಿನ ಮೇರೆಗೆ ಈ ಪ್ರದೇಶದಲ್ಲಿ ಎಷ್ಟು ಮಂದಿ ಅಕ್ರಮ ಒತ್ತುವರಿ ಮಾಡಿ ಕೊಂಡು ವಾಸಮಾಡುತ್ತಿದ್ದಾರೆ ಎಂಬ ಬಗ್ಗೆ ನಗರಸಭೆಯಿಂದ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಕಳೆದ ಒಂದು ವರ್ಷದ ಹಿಂದೆ ಅಂದಿನ ತಹಶೀಲ್ದಾರ್ ರಿಗೆ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಹಿಂದಿನ ತಹಸೀಲ್ದಾರ್ ಮಂಜುಳಾ ಅವರು ಒತ್ತುವರಿ ತೆರವು ಕಾರ್ಯಚರಣೆಗೆ ಮುಂದಾದಾಗ ನಿವಾಸಿಗಳು ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಮೊರೆ ಹೋಗಿ 6 ತಿಂಗಳ ಗಡುವು ಪಡೆದು ಕೊಂಡಿದ್ದರು.
ನಂತರ ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಒತ್ತಡ ಹೇರಿದ್ದ ಕಾರಣ ಇಂದು ತಹಸೀಲ್ದಾರ್ ಬಸವರಾಜು ಅವರು ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾರ್ಯಚರಣೆ ನಡೆಸಿದರು.
ಈ ವೇಳೆ ತಹಶೀಲ್ದಾರ್ ಹಾಗೂ ನಿವಾಸಿ ಗಳ ನಡುವೆ ಮಾತಿನ ಚಕಮಕಿ ನಡೆದು ಮತ್ತೆ 2 ದಿನ ಕಾಲಾವಕಾಶ ನೀಡುವಂತೆ ನಿವಾಸಿಗಳು ಒತ್ತಾಯಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಬಸವರಾಜು ಅವರು ಈಗಾಗಲೇ 6 ತಿಂಗಳು ಗಡುವು ಪಡೆದು ಕೊಂಡಿದ್ದೀರಿ ಮತ್ತೆ ಗಡುವು ನೀಡಲು ಸಾಧ್ಯವಿಲ್ಲ.ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಲಾಗುವುದು.
ವಾಸದ ಮನೆಗಳಿಗೆ ಸ್ವಲ್ಪ ಕಾಲಾವಕಾಶ ನೀಡುಲಾಗುವುದು ಎಂದು ತೆರವು ಕಾರ್ಯಚರಣೆ ಮುಂದುವರಿಸಿದರು.