(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಪಟ್ಟಣದ ಗರ್ಲ್ಸ್ ಹೋಂ ವಸತಿ ಶಾಲೆಯ ಕಾಂಪೌಂಡ್ ಕಿಡಿಗೇಡಿಗಳು ಮತ್ತೆ ಧ್ವಂಸ ಮಾಡಿರುವ ಘಟನೆ ಜರುಗಿದೆ.
ಪಟ್ಟಣದ ಮಹದೇಶ್ವರ ಕಾಲೇಜು ರಸ್ತೆಯಲ್ಲಿ ರುವ ಗರ್ಲ್ಸ್ ಹೋಂ ವಸತಿ ಶಾಲೆಯ ಕಾಂಪೌಂಡ್ ಗೋಡೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ಈ ವಸತಿ ಶಾಲೆಯಲ್ಲಿ ಸುಮಾರು 40 ಬಡ ವಿದ್ಯಾರ್ಥಿನಿಯರು ವಾಸವಿದ್ದು, ಈ ನಿಲಯದ ಸುತ್ತಲೂ ಈಗಾಗಲೇ ಕಾಂಪೌಂಡ್ ನಿರ್ಮಿಸಲಾಗಿತ್ತು.
ಕೆಲ ದಿನಗಳ ಹಿಂದೆ ಈ ಗೋಡೆಯನ್ನು ಅಪರಿಚಿತರು ಹಾನಿಗೊಳಿಸಿದ್ದರು.
ಮೇ 22 ರಂದು ಪುನಃ ಗೋಡೆಯನ್ನು ರಿಪೇರಿ ಮಾಡಲಾಗಿತ್ತು, ಆದರೆ ಮತ್ತೆ ಅದೇ ಗೋಡೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಹುಟ್ಟುಹಾಕಿದೆ.

ಅಲ್ಲದೆ, ರಾತ್ರಿ ವೇಳೆ ವಿದ್ಯಾರ್ಥಿನಿಯರ ಕೊಠಡಿಗಳ ಬಾಗಿಲು ತಟ್ಟಿದ ಪ್ರಕರಣಗಳು ಮತ್ತು ಕಾಂಪೌಂಡ್ ಒಳಗಡೆ ಇರುವ ಮರಗಳಲ್ಲಿ ಹಣ್ಣು ಕದಿಯುವ ಘಟನೆಗಳೂ ವರದಿಯಾಗಿದ್ದು, ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ.
ಈ ಹಿನ್ನಲೆಯಲ್ಲಿ ವಸತಿ ಶಾಲೆಯ ಜವಾಬ್ದಾರರು ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಸಿದ್ದು ತನಿಖೆ ಕೈಗೊಂಡಿದ್ದಾರೆ.