ಗ್ರೊಮೋರ್ ಕಂಪನಿಯ ರಸಗೊಬ್ಬರದ ಅಂಗಡಿಯಲ್ಲಿ ದಿಢೀರ್ ತಪಾಸಣೆ

Spread the love

ಕೊಳ್ಳೇಗಾಲ,ಆ.1: ಉತ್ತರ ಕರ್ನಾಟಕ ಭಾಗದಲ್ಲಿ ಯೂರಿಯಾ ಕೃತಕ ಅಭಾವದಿಂದ ಉಂಟಾಗಿರುವ ಗಲಾಟೆ ಹಿನ್ನೆಲೆಯಲ್ಲಿ ಇಂದು ಪಟ್ಟಣದಲ್ಲಿರುವ ಗ್ರೊಮೋರ್ ಕಂಪನಿಯ ರಸಗೊಬ್ಬರದ ಅಂಗಡಿಯ ಮೇಲೆ ಕಾರ್ಯಾಚರಣೆ ನಡೆಯಿತು.

ಪೊಲೀಸರು ಹಾಗೂ ತಹಶೀಲ್ದಾರರು ಧಿಡೀರ್ ಜಂಟಿ ಕಾರ್ಯಾಚರಣೆ ನಡೆಸಿ ದಾಸ್ತಾನು ಪರಿಶೀಲಿಸಿದರು.

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಕೊಳ್ಳೇಗಾಲ ವೃತ್ತ ನಿರೀಕ್ಷಕ ಶಿವಮಾದಯ್ಯ ಹಾಗೂ ತಹಶೀಲ್ದಾರ್ ಬಸವರಾಜು ಅವರು ಕಾರ್ಯಾಚರಣೆ ನಡೆಸಿದರು.

ಮೊದಲಿಗೆ ಪಟ್ಟಣದ ರಾಮಸ್ವಾಮಿ ಬಡಾವಣೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗ್ರೊಮೊರ್ ಅಂಗಡಿಗೆ ಏಕಏಕಿ ನುಗ್ಗಿ ರಸ ಗೊಬ್ಬರಗಳ ದಾಸ್ತಾನು ಹಾಗೂ ಮಾರಾಟದ ಪುಸ್ತಕಗಳನ್ನು ಪರಿಶೀಲನೆ ನಡೆಸಿ,ನಂತರ ಅಂಗಡಿಗೆ ಸಂಬಂಧಿಸಿದ ಎರಡು ಗೋದಾಮುಗಳಿಗೆ ನುಗ್ಗಿ ಪರಿಶೀಲನೆ ನಡೆಸಿ, ರಸಗೊಬ್ಬರದ ದಾಸ್ತಾನು ಹಾಗೂ ದಾಸ್ತಾನು ಪುಸ್ತಕದಲ್ಲಿ ದಾಖಲಾಗಿರುವಂತೆ ವಿವಿಧ ಬಗೆಯ ಗೊಬ್ಬರಗಳ ಮೂಟೆಗಳನ್ನು ಪರಿಶೀಲಿಸಿದರು.

ಈ ವೇಳೆ ತಹಸೀಲ್ದಾರ್ ಬಸವರಾಜು ಅವರು ಗೋದಾಮಿನಲ್ಲಿ ದಸ್ತಾನಿರುವ ಯೂರಿಯಾ, ಅಮೋನಿಯಂ ಸಲ್ಫೇಟ್, ಪೊಟ್ಯಾಶಿಯಂ, ಡಿ.ಎಪಿ ಹಾಗೂ ಇನ್ನಿತರ ವಿವಿಧ ರಸಗೊಬ್ಬರಗಳು ದಾಸ್ತಾನಿರುವುದನ್ನು ಕಂಡು ಸ್ಥಳದಲ್ಲಿದ್ದ ಗ್ರೊಮೊರ್ ಕಂಪನಿಯ ಸಿಬ್ಬಂದಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂಪನಿಯ ಪ್ರಭಾರ ವ್ಯವಸ್ಥಾಪಕ ನಂದನ್ ಕುಮಾರ್, ಕ್ಷೇತ್ರಪಾಲಕ ಬಾಲರಾಜು, ನಗದು ಗುಮಾಸ್ತ ಸುಭಾಷ್ ಗೋದಾಮಿನಲ್ಲಿರುವ ಗೊಬ್ಬರ ದಾಸ್ತಾನು ಹಾಗೂ ಮಾರಾಟದ ಕುರಿತು ಮಾಹಿತಿ ನೀಡಿದರು ಈ ವೇಳೆ ದಾಸ್ತಾನು ಪುಸ್ತಕದಲ್ಲಿ ದಾಖಲಾಗಿರುವಂತೆ ಗೋದಾಮಿನಲ್ಲಿರುವ ಗೊಬ್ಬರದ ದಾಸ್ತಾನಿನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಾರದ ಹಿನ್ನೆಲೆಯಲ್ಲಿ ವಾಪಸ್ ತೆರಳಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕ ಶಿವಮಾದಯ್ಯ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಯೂರಿಯಾ ಕೃತಕ ಅಭಾವದಿಂದ ಉಂಟಾಗಿರುವ ಗಲಾಟೆ ಹಿನ್ನೆಲೆಯಲ್ಲಿ
ಹಿರಿಯ ಅಧಿಕಾರಿಗಳ ನಿರ್ದೇಶನದ ಹಿನ್ನೆಲೆಯಲ್ಲಿ ಗೊಬ್ಬರದ ಅಂಗಡಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಈ ವೇಳೆ ದಾಸ್ತಾನು ಪುಸ್ತಕದಲ್ಲಿ ದಾಖಲಾಗಿರುವಂತೆ ಗೋದಾಮಿನಲ್ಲಿರುವ ಗೊಬ್ಬರದ ದಾಸ್ತಾನಿನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.