ಕೊಳ್ಳೇಗಾಲ: ಕೃಷಿ ಸಂಬಂಧ ರೈತರು ಕೇಳಿದಂತೆ ೧೧ ರಿಂದ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆ ಬಗ್ಗೆ ಮೇಲಾಧಿಕಾರಿಗಳ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಚೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ತಬಸ್ಸುಮ್ ಭರವಸೆ ನೀಡಿದರು.
ನಿರಂತರ ಜ್ಯೋತಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ಜಾಗೃತಿ ವಹಿಸುವಂತೆ ಲೈನ್ ಮೆನ್ ಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಚೆಸ್ಕಾಂ ಉಪವಿಭಾಗ ಕಚೇರಿ ಸಭಾಂಗಣದಲ್ಲಿ ನಡೆದ ನಾಲ್ಕನೇ ತ್ರೈಮಾಸಿಕ ಅವಧಿಯ ಸಾರ್ವಜನಿಕ ಸಂಪರ್ಕ ಸಭೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿರು ಹಾಗೂ ರೈತರು, ಕೃಷಿ ಅವಲಂಬಿತ ರೈತರಿಗೆ ವಿದ್ಯುತ್ ಪೂರೈಕೆ ಕೊರತೆ, ಬೀದಿ ದೀಪ ನಿರ್ವಹಣೆ, ನಿರಂತರ ಜ್ಯೋತಿ ಯೋಜನೆಯಲ್ಲಿನ ವಿದ್ಯುತ್ ಕೊರತೆ ಬಗ್ಗೆ ಮತ್ತು ಗ್ರಾಮಗಳಿಗೆ ನಿಯೋಜಿಸಿರುವ ಲೈನ್ ಮೆನ್ ಗಳ ಕರ್ತವ್ಯ ಲೋಪದ ಬಗ್ಗೆ ಆರೋಪಗಳು ಕೇಳಿಬಂದವು. ಕೃಷಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮಾಡಿಕೊಡಬೇಕೆಂದು ರೈತರಿಂದ ಬೇಡಿಕೆಗಳು ಕೇಳಿಬಂದವು.

ಈ ವೇಳೆ ಸಭೆಯ ನೇತೃತ್ವ ವಹಿಸಿದ್ದ ತಬಸ್ಸುಮ್ ಅವರು ಮಾತನಾಡಿ, ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದರ ಬಗ್ಗೆ ನಮ್ಮ ಇಲಾಖೆ ಸಿಬ್ಬಂದಿಗಳಿಂದ ತಪಾಸಣೆ ನಡೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಹಾಗೂ ರೈತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು ಬೀದಿ ದೀಪಗಳ ನಿರ್ವಹಣೆಯ ಬಗ್ಗೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಕ್ರಮವಹಿಸುವಂತೆ ಮಾರ್ಗದರ್ಶನ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ರಾಜು ಅವರು ಮಾತನಾಡಿ ಸಭೆಯಲ್ಲಿ ರೈತರಿಂದ ಬಂದಿರುವ ದೂರುಗಳು ಮತ್ತು ಸಮಸ್ಯೆಗಳ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳು ತಿಳಿಸಿದಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಹಾಗೂ ಇಲಾಖೆ ಲೈನ್ ಮೆನ್ ಗಳಿಂದ ಮುಂದಿನ ದಿನಗಳಲ್ಲಿ ಕರ್ತವ್ಯಲೋಪವಾಗದಂತೆ ಕ್ರಮ ವಹಿಸುತ್ತೇವೆ, ರೈತರ ಕೃಷಿ ಜಮೀನುಗಳಿಗೆ ಟಿಸಿ ಹಾಕುವುದಕ್ಕೆ ಸ್ಥಳ ಪರಿಶೀಲನೆ ನಡೆಸಿ ಒಂದು ಅಥವಾ ಎರಡು ಪಂಪ್ ಸೆಟ್ ಗೆ ಎಷ್ಟು ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳು ಬೇಕಾಗುತ್ತವೆ. ಎರಡಕ್ಕಿಂತ ಹೆಚ್ಚು ಪಂಪ್ ಸೆಟ್ ಗಳಿಗೆ ಎಷ್ಟು ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳು ಬೇಕಾಗುತ್ತವೆ. ಎಂಬ ಬಗ್ಗೆ ಅಕ್ಕಪಕ್ಕದ ಜಮೀನುಗಳಲ್ಲಿ ಕಂಬಗಳನ್ನು ಹಾಕಿಸಿ ವಿದ್ಯುತ್ ಪೂರೈಕೆ ಮಾಡಿಕೊಡಲಾಗುವುದು ಇಲಾಖೆ ನಿಗದಿ ಪಡಿಸಿದ ಮೊತ್ತವನ್ನು ಬಿಟ್ಟು ಬೇರೆ ಯಾರಿಗೂ ಹಣ ಕೊಡಬೇಕಾಗಿಲ್ಲ ಒಂದು ವೇಳೆ ಯಾರಾದರು ನಿಮ್ಮ ಬಳಿ ಹಣ ಕೇಳಿದರೆ ನಮಗೆ ಮಾಹಿತಿ ನೀಡಬೇಕು ಎಂದು ಹೇಳಿದರು.