ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳೊಡನೆ ಚರ್ಚಿಸಿದ ಎಂ.ಆರ್.ಮಂಜುನಾಥ್

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಪಟ್ಟಣದ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

ಶಾಸಕ ಎಂ.ಆರ್. ಮಂಜುನಾಥ್ ಅವರು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ತಲೆ ದೂರಿರುವ ಕುಡಿಯುವ ನೀರಿನ ಜ್ವಲಂತ ಸಮಸ್ಯೆಗಳ ಕುರಿತು ಅಧಿಕಾರಿಗಳೊಡನೆ ಗಂಭೀರ ಚರ್ಚೆ ನಡೆಸಿದರು.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳು, ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸೂಪರಿಡೆಂಟ್ ಇಂಜಿನಿಯರ್ ವೀರಪ್ಪ, ಚಾ.ನಗರ ಇಇ ಜಗದೀಶ್, ಎಇಇ ಸುಧನ್ವ ನಾಗ್ ಅವರು ಮಾಹಿತಿ ನೀಡಿದರು.

ಕೊಳ್ಳೇಗಾಲ ಉಪವಿಭಾಗಾದ ಎಇಇ ಸುಧನ್ವ ನಾಗ್ ಮಾತನಾಡಿ ಹನೂರು ತಾಲ್ಲೂಕಿನ ರಾಮಾಪುರ, ಅಜ್ಜಿಪುರ, ಒಡಕೆಹಳ್ಳ,ದೊಮ್ಮನಗದ್ದೆ, ಬಂಡಳ್ಳಿ, ಎಂ.ಟಿ. ದೊಡ್ಡಿ ಕೆಂಪಯ್ಯನಹಟ್ಟಿ, ಗೊಲ್ಲರದಿಂಬ, ಸತ್ತಿಮಂಗಲ,ಪಳನಿಸ್ವಾಮಿ ದೊಡ್ಡಿ ಚಂಗವಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಸಮಸ್ಯೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ದೊಡ್ಡಾಲತ್ತೂರು, ಎಲ್ಲೇಮಾಳ, ದಿನ್ನಳ್ಳಿ, ಹೂಗ್ಯಂ, ಕೂಡ್ಲೂರು, ಕೌದಳ್ಳಿ, ಕುರಟ್ಟಿಹೊಸೂರು, ದಂಟ್ಟಳ್ಳಿ,
ಮಾರ್ಟಳ್ಳಿ ಪಾಲಿಮೇಡು, ದಾಂಡಮೇಡು,
ರಾಮಾಪುರ ಮಾಮರದ ದೊಡ್ಡಿ, ಗೋಪಿಶೆಟ್ಟಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪೈಪ್ ಲೈನ್ ಮಾಡಲು ಅರಣ್ಯ ಇಲಾಖೆಯಿಂದ ಕಾನೂನು ತೊಡಕಿದೆ. ದೊಡ್ಡಾಲತ್ತೂರು ಗ್ರಾ.ಪಂ ವ್ಯಾಪ್ತಿಯ ಕೆಂಪಯ್ಯನಹಟ್ಟಿ, ವಡ್ಡರದೊಡ್ಡಿ ಗ್ರಾಮಗಳಲ್ಲಿ ಖಾಸಗಿ ಬೋರ್ ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ, ಮಾರ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹರ್ ಗರ್ ಜಲ್ ಯೋಜನೆ ಯಡಿ ಕೊಳ್ಳೇಗಾಲ ತಾಲ್ಲೂಕಿನ 64, ಹನೂರು ತಾಲ್ಲೂಕಿನ 260 ಒಟ್ಟು131 ಹಳ್ಳಿಗಳಲ್ಲಿ ಕಾಮಗಾರಿಗಳನ್ನು ನಡೆಸಿ ಗ್ರಾ. ಪಂ ಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.

ಸಭೆಯ ನಂತರ ಸುದ್ದಿಗಾರರೊಡನೆ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್ ಅವರು,ಸಭೆಯಲ್ಲಿ ಮುಖ್ಯವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಕೊಡಲು ಏನು ತೊಡಕಿತ್ತು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಅವರಿಂದ ಮಾಹಿತಿ ಪಡೆದುಕೊಂಡು ಚರ್ಚಿಸಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಅರಣ್ಯ ಇಲಾಖೆಯಿಂದ ತೊಡಕಾಗಿರುವ ಬಗ್ಗೆ ಗೊತ್ತಾಗಿದೆ,ಅದಕ್ಕೆ 2023 ರಲ್ಲೇ ಕ್ಲಿಯರೆನ್ಸ್ ನೀಡಲಾಗಿತ್ತು. ಇಲಾಖೆ ಮತ್ತೆ ಮತ್ತೆ ಏನು ಪ್ರಶ್ನೆ ಮಾಡುತ್ತಾ ಬಂದಿದೆ ಅದನ್ನೆಲ್ಲ ಸರಿಪಡಿಸಿ ಕೊಂಡು ಬರಲಾಗಿದೆ ಆದರೂ  ಇದು ಹೀಗೆ ಹೋದರೆ ಬಹಳ ವಿಳಂಬವಾಗಲಿದೆ ಎಂದು ಬೇಸರಪಟ್ಟರು.

ಇದು ಕೇಂದ್ರ ಸರ್ಕಾರದ ಯೋಜನೆ, ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಸಮನ್ವಯತೆ ಬೇಕು ಆ ಕಾರಣಕ್ಕಾಗಿ ಈಗ ಎಲ್ಲಿ ಸಮಸ್ಯೆ ಇದೆ ಅದನ್ನು ಮತ್ತೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ತ್ವರಿತಗೊಳಿಸಿ ತಕ್ಷಣ ಕ್ಲೀಯರೆನ್ಸ್ ತೆಗೆದುಕೊಳ್ಳಲು ಏನು ಬೇಕು ಎಂಬ ಬಗ್ಗೆ ಇವತ್ತು ಸಭೆ ಕರೆಯಲಾಯಿತು
ಎಂದು‌ ಶಾಸಕರು ಹೇಳಿದರು.

ತ್ವರಿತವಾಗಿ ನಮಗೇನಾದರು ಕ್ಲೀಯರೆನ್ಸ್ ಆದರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಓವರ್ ಹಡ್ ಟ್ಯಾಂಕ್ ಅರಣ್ಯದೊಳಗೆ ಪೈಪ್ ಲೈನ್ ಹಾಕುವುದು ಅಗತ್ಯ ವಾಗಿದ್ದು ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಅದಕ್ಕೆ ಕ್ಲಿಯರೆನ್ಸ್ ಕೊಡಲು ತೀರ್ಮಾನ ಮಾಡಲಾಗಿದೆ. ಕೆಲಸ ಮಾಡಲು ಏನು ಬೇಕು ಎಂಬ ಬಗ್ಗೆ ನಂತರ ತೀರ್ಮಾನವಾಗಲಿದೆ. ಯೋಜನೆಗೆ ಅರಣ್ಯ ಇಲಾಖೆಯಿಂದ ಶೇಕಡ 60 ರಿಂದ 70 ರಷ್ಟು ಕ್ಲಿಯರೆನ್ಸ್ ಸಿಕ್ಕಿದೆ ಉಳಿದದ್ದನು ಕ್ಲಿಯರ್ ಮಾಡಬೇಕಿದೆ ಎಂದು ತಿಳಿಸಿದರು.

ಇದನ್ನು 6 ರಿಂದ 8 ತಿಂಗಳಲ್ಲಿ ಪೂರ್ಣಗೊಳಿಸ ಬೇಕೆಂಬ ಯೋಜನೆಯಿದೆ, ಸಭೆಯಲ್ಲಿ ನಡೆದ ಚರ್ಚೆ ಫಲಪ್ರದವಾಗಲಿದೆ.
ಸಮಸ್ಯೆ ಎಲ್ಲಿದೆ, ಅದನ್ನು ಬಗೆಹರಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಮಂಜುನಾಥ್ ವಿವರಿಸಿದರು.

ಸಭೆಯಲ್ಲಿ ಚಾ.ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಡಿಸಿಎಫ್ ಭಾಸ್ಕರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸೂಪರಿಡೆಂಟ್ ಇಂಜಿನಿಯರ್ ವೀರಪ್ಪ, ಚಾ.ನಗರ ಇಇ ಜಗದೀಶ್, ಎಇಇ ಸುಧನ್ವ ನಾಗ್, ಪಿ ಡಬ್ಲ್ಯೂ ಡಿ ಎಇಇ ಪುರುಷೋತ್ತಮ್, ಜೆಇ ಸುರೇಂದ್ರ, ಲ್ಯಾಂಡ್ ಆರ್ಮಿ ಇಂಜಿನಿಯರ್ ಕಾರ್ತಿಕ್, ಜೆಜೆಎಂ ಕಾಮಗಾರಿ ಗುತ್ತಿಗೆ ಪಡೆದಿರುವ ಸುಪ್ರದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.