ಬಸ್, ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು 15 ಮಂದಿಗೆ ಗಂಭೀರ ಗಾಯ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೆ.ಎಸ್.ಆರ್.ಟಿ. ಸಿ ಬಸ್ ಹಾಗೂ ಟಾಟಾಏಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿ 15 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಹೊರವಲಯದಲ್ಲಿಂದು ನಡೆದಿದೆ.

ಕೊಳ್ಳೇಗಾಲ ಸಮೀಪದ ಸಿದ್ದಯ್ಯನಪುರ ಗ್ರಾಮದ ಬಳಿ ಇಂದು ಮಧ್ಯಾಹ್ನ ಈ ಭೀಕರ ಅಪಘಾತ ಸಂಭವಿಸಿದ್ದು,
ತಾಲೂಕಿನ ಬಾನೂರು ಗ್ರಾಮದ ರಾಜಮ್ಮ (53) ಶೃತಿ (30) ಮೃತ ದುರ್ದೈವಿಗಳು.

ರತ್ನಮ್ಮ, ಹರ್ಷಿತ, ನಿಂಗರಾಜು, ಸುಧಾ, ಗೌತಮ್, ಪ್ರಕಾಶ್, ರಮೇಶ್, ಮಹೇಶ್, ರಾಧಮ್ಮ, ಸಣ್ಣಮ್ಮ, ಸಿಂಧು, ಮಹದೇವ ಅವರುಗೆ ಗಂಭೀರ ಗಾಯಗಳಾಗಿವೆ.

ಎಲ್ಲರೂ ಕೊಳ್ಳೇಗಾಲದಿಂದ ಟಾಟಾ ಏಸ್ ನಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಈ ವೇಳೆ ಹನೂರು ಕಡೆಯಿಂದ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಸಿದ್ದಯ್ಯನಪುರದ ಬಳಿ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಟಾಟಾ ಎಸ್ ನಜ್ಜುಗುಜ್ಜಾಗಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ, 15 ಮಂದಿ ಗಾಯಗೊಂಡಿದ್ದಾರೆ.

ವಿಷಯ ತಿಳಿದ ಕೂಡಲೇ ಕೊಳ್ಳೇಗಾಲ ಪಟ್ಟಣ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸಾಗಿಸಿದ್ದಾರೆ.

ಅಲ್ಲಿನ ವೈದ್ಯರಾದ ಡಾಕ್ಟರ್ ರಾಜಶೇಖರ್ ಡಾಕ್ಟರ್ ದಿಲೀಪ್ ಡಾಕ್ಟರ್ ರಮೇಶ್ ಹಾಗೂ ಇತರ ವೈದ್ಯರು ತುರ್ತು ಪ್ರಥಮ ಚಿಕಿತ್ಸೆ ನೀಡಿದರು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಚಾಮರಾಜನಗರ ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ರವಾನಿಸಲಾಯಿತು.ಆಸ್ಪತ್ರೆ ಮುಂದೆ ಜನಜಾತ್ರೆ ಸೇರಿದೆ.

ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ