ಹುಟ್ಟಿದ ಊರಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ನಟ ಗಣೇಶ್ ರಾವ್ ಕೇಸರ್ಕರ್

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.8: ಹುಟ್ಟಿದ ಊರಿಗೆ ಹಾಗೂ ಓದಿದ ಶಾಲೆಗೆ ಕಾಯಕಲ್ಪ ಮಾಡಲು ಹೊರಟಿರುವ ಚಲನಚಿತ್ರ ನಟ ಗಣೇಶ್ ರಾವ್ ಕೇಸರ್ ಕರ್ ಅವರು ತಮ್ಮ ತಂದೆ, ತಾಯಿ ಸ್ಮರಣಾರ್ಥ ದೇವಾಲಯ ನಿರ್ಮಾಣ ಮತ್ತಿತರ ಮಾದರಿ ಕೆಲಸ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ದೇವಾಲಯ ನಿರ್ಮಿಸಿ, ಓದಿದ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಲು ಹೊರಟಿದ್ದು ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ನಡೆಸುವ ಮೂಲಕ ಸ್ವಗ್ರಾಮದ ಜನರ ಸೇವೆಗೆ ಮುಂದಾಗಿದ್ದಾರೆ.

ತಾಲೂಕಿನ ಹೊಂಡರಬಾಳು ಗ್ರಾಮದವರಾದ ಗಣೇಶ್ ರಾವ್ ಕೇಸರ್ ಕರ್ ಅವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿ.ಆರ್.ಫಿಲಮ್ಸ್ ಅಂಡ್ ಕಲ್ಚರಲ್ ಅಕಾಡೆಮಿ, ಶ್ರೀ ಸಿದ್ದೇಶ್ವರ ಗ್ರಾಮೀಣಾಭಿವೃದ್ಧಿ ಹಾಗೂ ಹಬ್ಬ ಹರಿದಿನ ಜಾತ್ರಾ ಸೇವಾ ಸಮಿತಿ,ಲಯನ್ಸ್ ಕ್ಲಬ್ ಆಪ್ ಸೆಂಟೇನಿಯಲ್, ಸ್ಪಂದನ ಶ್ರದ್ಧಾ ಐ ಕೇರ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ  ಉಚಿತಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಅಕಾಡೆಮಿಯಿಂದ ಅನ್ನ, ಆರೋಗ್ಯ ಅಕ್ಷರಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ನಮ್ಮ ತಂದೆ ಆರ್.ಕೃಷ್ಣರಾವ್ ಸೈನಿಕರಾಗಿದ್ದವರು. ತಂದೆ, ತಾಯಿಯರ ಸ್ಮರಣಾರ್ಥ ಗ್ರಾಮದಲ್ಲಿ ಬಸಪ್ಪ ದೇವರ ಗದ್ದಿಗೆ ನಿರ್ಮಾಣ ಮಾಡಿ ಕಳೆದ ಫೆಬ್ರವರಿ 21ರಂದು ದೇವಾಲಯದ ಉದ್ಘಾಟನೆ ಮಾಡಲಾಗಿದೆ. ಹಾಗೆಯೇ ಒಂದು ದೇವಸ್ಥಾನ ಕಟ್ಟುವ ಬದಲು 10 ಶಾಲೆ ನಿರ್ಮಿಸಿ ಎಂಬ ಡಾ ಅಂಬೇಡ್ಕರ್ ಚಿಂತನೆಯಂತೆ ನಾನು ಓದಿದ ಶಾಲೆಯನ್ನು ಅದೇ ದಿನ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ಅಧಿಕೃತವಾಗಿ ದತ್ತು ತೆಗೆದುಕೊಂಡು ಕಾಯಕಲ್ಪ ಮಾಡಲು ಮುಂದಾಗಿದ್ದೇನೆ,ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದು ಸ್ಮಾರ್ಟ್ ಕ್ಲಾಸ್ ಮಾಡಲು ತೀರ್ಮಾನಿಸಿದ್ದೇನೆ. ಅದಕ್ಕಾಗಿ ಈಗಾಗಲೇ ಒಂದಷ್ಟು ಸಂಘ ಸಂಸ್ಥೆಗಳೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಶಾಲೆಯ ಅಭಿವೃದ್ಧಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ಖಾತೆ ತೆರೆದು ಸಕ್ರಿಯವಾಗಿದ್ದು ಇದನ್ನು ನೋಡಿದ ಸಂತೂರವರು ವಾಟರ್ ಫಿಲ್ಟರ್ ಅನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.

ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಅವರ ಸಹಕಾರ ದೊಡನೆ ಶಾಲೆಯ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಸಿ ಸಾಮಾಜಿಕ ಸಂದೇಶವಾದ ಘೋಷವಾಕ್ಯಗಳನ್ನು ಬರೆಸಲಾಗಿದೆ. ಇಂದಿಗೆ ದೇವಾಲಯ ಉದ್ಘಾಟನೆಯಾಗಿ 48 ದಿನವಾಗಿದೆ. ಮಂಡಲ ಪೂಜೆ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದ್ದು. 75 ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಗಣೇಶ್ ರಾವ್ ಕೇಸರ್ ಕರ್ ತಿಳಿಸಿದರು

ಕೆಚ್ಚೆದೆಯ ಕನ್ನಡತಿ ಅನು ಮಾತನಾಡಿ ಶಾಲೆಯ ದುರಸ್ತಿ ಹಾಗೂ ಸುಣ್ಣ-ಬಣ್ಣದ ಖರ್ಚು ವೆಚ್ಚಗಳನ್ನು ಗಣೇಶ್ ರಾವ್ ಕೇಸರ್ ಕರ್ ರವರೆ ನೋಡಿಕೊಂಡಿದ್ದಾರೆ. ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಅಭಿಯಾನ ನಡೆಸುತ್ತಿದ್ದು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ ಎಂದು ಹೇಳಿದರು.

ಬಡವರಿಗೆ ಶಿಕ್ಷಣ ಸಿಗುವುದು ಕನ್ನಡ ಶಾಲೆಗಳಲ್ಲಿ ಮಾತ್ರ. ಜೊತೆ ಜೊತೆಗೆ ಧೂಳು ಮುಕ್ತ ಕರ್ನಾಟಕ ಅಭಿಯಾನ, ಕಾಡು ಬೆಳೆಸಿ ಅಭಿಯಾನ, ವ್ಯಸನಮುಕ್ತ ಅಭಿಯಾನ, ಸ್ವಚ್ಛ ಭಾರತ ಅಭಿಯಾನ ಸೇರಿದಂತೆ ಅಭಿಯಾನಗಳನ್ನು ಕೈಗೊಂಡಿದ್ದು ರಾಜ್ಯದ 25 ಜಿಲ್ಲೆಗಳಲ್ಲಿ ಈಗಾಗಲೇ 147 ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸುಣ್ಣ-ಬಣ್ಣ ಬಳಿದಿದ್ದೇವೆ‌ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಚನ್ನ ಒಡೆಯನಪುರ ಹಾಗೂ ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಶಾಲೆಗಳನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣ ಬಳಿದಿದ್ದೇವೆ ಮೈಸೂರು ಭಾಗದ ನಾಗರಹೊಳೆ ಹೆಗ್ಗಡದೇವನ ಕೋಟೆ, ಹಾಸನ, ಮಂಡ್ಯ ಹಾಗೂ ಇನ್ನಿತರ ಜಿಲ್ಲೆಯ ಗ್ರಾಮಗಳ ಶಾಲೆಗಳನ್ನು ಸ್ವಚ್ಛಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಶಾಲೆಯಲ್ಲಿ ಕಳೆದ ಹತ್ತು ದಿನಗಳಿಂದ ನಮ್ಮ ತಂಡ ಕೆಲಸ ಮಾಡುತ್ತಿದೆ.13 ಮಂದಿ ನಮ್ಮ ತಂಡದಲ್ಲಿದ್ದಾರೆ, ಕನಿಷ್ಠ 10 ವರ್ಷ ಸೇವೆ ಮಾಡಲು ಮನೆಯವರಿಂದ ಅನುಮತಿ ಪಡೆದು ಬಂದಿದ್ದೇವೆ. ನಾನು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನವಳು ಕಲ್ಯಾಣ ಕರ್ನಾಟಕ ತುಂಬಾ ಹಿಂದುಳಿದಿದೆ ಇಲ್ಲಿ ಅನಕ್ಷರತೆ, ಬಡತನ, ನಿರುದ್ಯೋಗ ತುಂಬಾ ಇದೆ. ಈ ಭಾಗದ ಜನ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಮಾಹಿತಿ ಅರಿತು ಈ ಅಭಿಯಾನ ಪ್ರಾರಂಭಿಸಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಲಿಂಗಾಪುರ ಶಾಲೆಯಲ್ಲಿ ಪ್ರಥಮವಾಗಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲಿಂದ ಇದನ್ನೇ ಮುಂದುವರೆಸಿದೆ ಇದು ಯಾವುದೇ ಪ್ರಶಸ್ತಿ ಅಥವಾ ಹೆಸರಿಗಲ್ಲ ನಾನೇನು ರಾಜಕಾರಣಿಯೂ ಅಲ್ಲ ಸೇವೆಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಏಕೆಂದರೆ ಮಾನವರಾದ ನಾವು ಮಾನವೀಯ ಮೌಲ್ಯ ಹೊಂದಿರಬೇಕು ಇದು ಸರ್ಕಾರಕ್ಕೆ ಮುಟ್ಟಬೇಕು ಕಳಪೆ ಕಾಮಗಾರಿಗಳು ನಿಲ್ಲಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳ, ಶಾಲೆಯ ಮುಖ್ಯ ಶಿಕ್ಷಕ ವಾಸುದೇವ, ಸುರೇಶ್ ಗೌಡ, ರವಿ ಸಂತೂ, ಮಲ್ಲೇಶ್ ಮತ್ತಿತರರು ಹಾಜರಿದ್ದರು.

.