(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳ ಬದುಕು ಹಸನಾಗಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮನದಾಳದಿಂದ ನುಡಿದರು.
ನಗರಸಭೆ ನಗರೋತ್ಥಾನ 4 ನೇ ಹಂತದ ಯೋಜನೆಯಡಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಸರ್ಕಾರ ಅನೇಕ ಯೋಜನೆ ರೂಪಿಸಿದೆ, ಬಡಜನರ ಬದುಕು ಹಸನಾಗಿ ಉತ್ತಮ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಹೊಲಿಗೆ ಯಂತ್ರ ನೀಡಲಾಗಿದೆ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.

ಪ್ರತಿ ಹೊಲಿಗೆ ಯಂತ್ರಕ್ಕೆ 8000 ರೂ ನಂತೆ 235 ಫಲಾನುಭವಿಗಳಿಗೆ 20.60 ಲಕ್ಷ ರೂ ವೆಚ್ಚದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ, ಅದರಲ್ಲಿ ಮೀಸಲಾತಿವಾರು ಸೌಲಭ್ಯ ನೀಡಿದ್ದು ಪ.ಜಾತಿಯರಿಗೆ ಶೇ 15 ರಷ್ಟು, ಪ ಪಂಗಡದವರಿಗೆ ಶೇ.6.95 ಇತರರಿಗೆ ಶೇ.7.25 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಹಿಂದೆ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಸಾಂಕೇತಿಕವಾಗಿ ಸೌಲಭ್ಯಗಳನ್ನು ವಿತರಿಸಿ ನಂತರ ತಮಗೆ ಬೇಕಾದವರಿಗೆ ಕೊಡುತ್ತಿದ್ದರು ಇದರಿಂದಾಗಿ ಅರ್ಹರಿಗೆ ಸಿಗದೆ ಮತ್ಯಾರಿಗೋ ಸಿಗುತ್ತಿತ್ತು. ಸೌಲಭ್ಯ ಪಡೆದ ಕೆಲವರು ಮಾರಾಟ ಮಾಡಿಕೊಳ್ಳುತ್ತಿದ್ದರು. ಈಗ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ. ಆದ್ದರಿಂದ ಯಾರೂ ಮಾರಾಟ ಮಾಡಬೇಡಿ ಏಕೆಂದರೆ ನಾನು ಯಾವ ಸಂದರ್ಭದಲ್ಲಿ ಪಟ್ಟಿ ಹಿಡಿದು ನಿಮ್ಮ ಮನೆಗೆ ಪರಿಶೀಲನೆಗೆ ಬರುವೆನೋ ತಿಳಿಯದು ಎಂದು ಎಚ್ಚರಿಕೆ ನೀಡಿದರು.
ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಇಷ್ಟೊಂದು ಸೌಲಭ್ಯಗಳಿವೆ ಎಂದು ಇಲ್ಲಿನ ಯಾರಿಗೂ ತಿಳಿದಿರಲಿಲ್ಲ. ನಗರಸಭೆ ವತಿಯಿಂದ ಸಾಂಸ್ಕೃತಿಕ ಸಾಧನೆ ಮಾಡಿದವರಿಗೆ 1 ಲಕ್ಷ ರೂ, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 2.20 ಲಕ್ಷ ರೂ, ಶೌಚಾಲಯ ನಿರ್ಮಾಣ ಫಲಾನುಭವಿಗಳಿಗೆ 5 ಲಕ್ಷ ರೂ, ವಿವಿಧ ವಸತಿ ಯೋಜನೆ ಫಲಾನುಭವಿಗಳಿಗೆ 10 ಲಕ್ಷ ಪಕ್ಕಾ ಮನೆ ನಿರ್ಮಾಣಕ್ಕಾಗಿ 1.8 ಕೋಟಿ ರೂ, ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ನೀಡಲಾಗಿದೆ ಹಾಗೆಯೇ ಇತರ ಜನಾಂಗದ ಫಲಾನುಭವಿಗಳಿಗೆ 73.90 ಲಕ್ಷ ರೂಗಳನ್ನು ನೀಡಲಾಗಿದೆ ಎಂದು ಶಾಸಕ ಕೃಷ್ಣಮೂರ್ತಿ ವಿವರಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ತಹಶೀಲ್ದಾರ್ ಬಸವರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶ ಇಇ ಅಲ್ತಾಫ್, ನಗರಸಭಾಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ. ಪಿ. ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರುಗಳಾದ ಮಂಜುನಾಥ್, ರಾಘವೇಂದ್ರ, ಕವಿತ ಭಾಗ್ಯ, ನಾಗಸುಂದ್ರಮ್ಮ,ಪೌರಾಯುಕ್ತ ರಮೇಶ್, ಎಇಇ ನಾಗೇಂದ್ರ, ಆರೋಗ್ಯಾಧಿಕಾರಿ ಚೇತನ್, ಪರಶಿವಯ್ಯ ಮತ್ತಿತರರು ಹಾಜರಿದ್ದರು.