ಕೆಎಂಪಿಕೆ ಟ್ರಸ್ಟ್ ನಿಂದ ಮಾನವೀಯ ಕಾರ್ಯ:ನಿರಾಶ್ರಿತರಿಗೆ ಹೊದಿಗೆ ವಿತರಣಾ ಅಭಿಯಾನ

ಮೈಸೂರು: ಈಗಾಗಲೆ ಚುಮು,ಚುಮು‌ ಚಳಿ,ಹಿಮಗಾಳಿ ಬೀಸಲಾರಂಭಿಸಿದೆ.ಮನೆ‌ ಇರುವವರೇನೊ ಬೆಚ್ಚಗೆ ಕಂಬಳಿ ಹೊದ್ದು ಮಲಗಿಬಿಡುತ್ತಾರೆ.ಆದರೆ ನಿರ್ಗತಿಕರ ಪಾಡು ನಿಜಕ್ಕೂ ಹೇಳತೀರದು.

ಸಮಾಜಸೇವೆಯಲ್ಲಿ ತೊಡಗಿರುವ
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಇಂತಹ ಅಸಹಾಯಕರು,ನಿರ್ಗತಿಕರ ಬವಣೆಗೆ ಮರುಗಿ ಪ್ರತಿ ವರ್ಷ ನೆರವಾಗುತ್ತಿದೆ.

ಕೆಎಂಪಿಕೆ ಟ್ರಸ್ಟ್ ನವರ ಈ ಕಾರ್ಯ ನಿಜಕ್ಕೂ ಇತರರಿಗೆ ಮಾದರಿಯಾಗಿದೆ,ಜತೆಗೆ ಸ್ತುತ್ಯಾರ್ಹ ಕೂಡಾ ಹೌದು.

ನಿರಾಶ್ರಿತರಿಗೆ ಹಾಗೂ ಅಸಹಾಯಕರಿಗೆ ಗ್ರಾಮೀಣ ಪ್ರದೇಶದ ಹಾಡಿ ಜನಾಂಗಕ್ಕೆ ಹೊದಿಕೆ ವಿತರಣಾ ಅಭಿಯಾನವನ್ನು ಕೆಎಂಪಿಕೆ ಟ್ರಸ್ಟ್‌ ಹಮ್ಮಿಕೊಂಡಿದೆ.

ಈ ಅಭಿಯಾನದ ಪ್ರಚಾರ ಸಾಮಗ್ರಿಗಳನ್ನು
ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಹುಣಸೂರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಟ್ರಸ್ಟ್‌ ಕಾರ್ಯಕ್ಕೆ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಶಾಸಕರು, ಸಾಂಸ್ಕೃತಿಕ ನಗರಿ ಎಲ್ಲರಿಗೂ ಆಶ್ರಯ ನೀಡಿದೆ, ಕೆಲವರ ಜೀವನದಲ್ಲಿ ವಿಧಿಯ ಆಟ ಅಥವಾ ಪರಿಸ್ಥಿತಿ ತೊಂದರೆಗೆ ಸಿಲುಕುವಂತೆ ಮಾಡಿಬಿಡುತ್ತದೆ‌ ಎಂದು ‌ವಿಷಾದಿಸಿದರು.

ಕೆಲವರು ಬಹಳ
ತೊಂದೆರೆಯಲ್ಲಿರುತ್ತಾರೆ,ಅನಿವಾರ್ಯವಾಗಿ ಮಳೆ ಚಳಿ ಎನ್ನದೇ ಬಸ್ ನಿಲ್ದಾಣ, ರೈಲ್ವೇನಿಲ್ದಾಣ, ದೇವಸ್ಥಾನ,ಚಿತ್ರಮಂದಿರ, ಸರ್ಕಾರಿ ಕಟ್ಟಡಗಳೆ ಅವರಿಗೆ ಆಶ್ರಯತಾಣವಾಗಿರುತ್ತದೆ ಅಲ್ಲೆ ಮಲಗಿರುತ್ತಾರೆ.

ಹೀಗೆ ಮೈಸೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಿರಾಶ್ರಿತರಿದ್ದು, ಮಾನವೀಯತೆ ದೃಷ್ಟಿಯಿಂದ ಚಳಿ ಮಳೆಯಿಂದ ನಿರಾಶ್ರಿತರ ರಕ್ಷಣೆ ಸಾರ್ವಜನಿಕರ ಹೊಣೆ ಎನ್ನುವ ಸಂಕಲ್ಪದೊಂದಿಗೆ ಅವರಿರುವ ಜಾಗಕ್ಕೆ ಹೋಗಿ ಹೊದಿಕೆ ನೀಡುವ ಕೆ.ಎಂ.ಪಿ.ಕೆ ಟ್ರಸ್ಟ್ ಪ್ರಾರಂಭಿಸಿರುವ ಅಭಿಯಾನ ನಿಜಕ್ಕೂ ಶ್ಲಾಘನೀಯ ಎಂದು ಹರೀಶ್ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರಸ್ಟ್ ನ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ,ಕಳೆದ ವರ್ಷ 1000 ಮಂದಿಗೆ ಕಂಬಳಿ ನೀಡಿದ್ದೆವು ಎಂದು ತಿಳಿಸಿದರು.

ರಸ್ತೆ ಬದಿ ಮಲಗುವ ನಿರಾಶ್ರಿತರು, ಅಸಹಾಯಕರು, ರಾತ್ರಿ ವೇಳೆ ರೈಲ್ವೆ ನಿಲ್ದಾಣ ,ಸಬ್ ಅರ್ಬನ್ ಬಸ್ ಸ್ಟ್ಯಾಂಡ್ ಸಿಟಿಬಸ್ ಸ್ಟ್ಯಾಂಡ್, ಮಾರುಕಟ್ಟೆ ಸೇರಿದಂತೆ ಸತತ 4 ವರ್ಷ ರಾತ್ರಿ ವೇಳೆ 1 ತಿಂಗಳು ನಿರಂತರವಾಗಿ ಅಭಿಯಾನವನ್ನು ಹಮ್ಮಿಕೊಂಡು ಯಶಸ್ವಿ ಗೊಳಿಸಿದ್ದೇವೆ ಎಂದು ಹೇಳಿದರು.

ಈ ವರ್ಷ ಕೂಡಾ ಇದೇ ಡಿಸೆಂಬರ್ 1ರಿಂದ ಜನವರಿ 15ರವರೆಗೂ ಪ್ರತಿದಿನ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಮಲಗಿರುವ ಅಸಹಾಯಕರು ಹಾಗೂ ನಿರಾಶ್ರಿತರಿಗೆ 1000 ಹೊದಿಕೆ ವಿತರಿಸಲು ನಿರ್ಧರಿಸಿದ್ದೇವೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಸಾರ್ವಜನಿಕರು ಕೈಜೋಡಿಸಿ ನೆರವು ನೀಡಬಯಸಿದರೆ ಮೊಬೈಲ್ ನಂಬರ್ 9880752727 ಸಂಪರ್ಕಿಸಬೇಕೆಂದು ಕೋರಿದರು.

ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಯುವ ಮುಖಂಡರಾದ ನವೀನ್ ,ರವಿಚಂದ್ರ, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.