(ವರದಿ:ಸುರೇಶ್,ಕನಕಪುರ)
ಕನಕಪುರ: ಶಬರಿಮಲೆಗೆ ತೆರಳಿದ್ದ ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರು ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಕೇರಳದ ಭಸ್ಮಾಕುಲಂ ರಸ್ತೆ ಮಲ್ಲಿಕಾಪುರಂನಲ್ಲಿ ಈ ಘಟನೆ ಸಂಭವಿಸಿದ್ದು,ಕನಕಪುರ ನಗರದ ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ ಅಲಿಯಾಸ್ ಕುಂಬಿ (40) ಮೃತಪಟ್ಟ ಭಕ್ತ.
ಕನಕಪುರದಿಂದ ಶನಿವಾರ ಸಂಜೆ ಕುಮಾರ್ ಸೇರಿದಂತೆ 5 ಮಂದಿ ಇರುಮುಡಿ ಕಟ್ಟಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ಶಬರಿಮಲೆಗೆ ತೆರಳಿದ್ದರು.
ಸೋಮವಾರ ಮಧ್ಯಾಹ್ನ ಪತ್ನಿ ಮಹಾಲಕ್ಷ್ಮಿಯೊಂದಿಗೆ ಶಬರಿಮಲೆ ಹತ್ತುತ್ತಿರುವ ಬಗ್ಗೆ ಕುಮಾರ್ ಮಾಹಿತಿ ನೀಡಿದ್ದರು,ಆದರೆ ಸಂಜೆ ವೇಳೆಗೆ ಕಟ್ಟಡದ ಮೇಲಿಂದ ಬಿದ್ದು ಪತಿ ಸಾವನ್ನಪ್ಪಿದ್ದಾರೆಂದು ಮಾಹಿತಿ ಬಂದಿತೆಂದು ಮೃತನ ಪತ್ನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಿದ್ದ ಕೂಡಲೇ ಕೊಟ್ಟಾಯಂ ಆಸ್ಪತ್ರೆಗೆ ಕುಮಾರನನ್ನು ದಾಖಲಿಸಲಾಯಿತು,ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಸ್ನೇಹಿತ ಕೃಷ್ಣ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪತ್ನಿ ಮಹಾಲಕ್ಷ್ಮಿ ಮಾತನಾಡಿ ನಾಲ್ಕು ಮಂದಿ ಸ್ನೇಹಿತರು ಕರೆದುಕೊಂಡು ಹೋಗುವಾಗ ನನ್ನ ಪತಿ ಚೆನ್ನಾಗಿಯೇ ಇದ್ದರು.ಏಕಾಏಕಿ ಈ ರೀತಿ ಸಾವನ್ನಪ್ಪಿರುವ ಬಗ್ಗೆ ಅನುಮಾನ ಕಾಡುತ್ತಿದೆ.ಜತೆಗೆ ನನ್ನ ಪತಿ ಕಟ್ಟಡದ ಮೇಲಿಂದ ಜಿಗಿಯುತ್ತಿರುವ ಚಿತ್ರ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ,ಅದನ್ನು ನೋಡಿ ನಮಗೆ ಕುಮಾರ್ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದಿಲ್ಲ ಅನ್ನಿಸುತ್ತಿದೆ ಹಾಗಾಗಿ ಈ ಕುರಿತು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.