ಭಾರತದ ಇತಿಹಾಸ ಪುಟದಲ್ಲಿ ಕೆಂಪೇಗೌಡರ ಹೆಸರು ಚಿರಸ್ಥಾಯಿ- ಜಿ.ಟಿ ದೇವೇಗೌಡ

Spread the love

ಮೈಸೂರು: ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಾಂತರಾಗಿ ಯಲಹಂಕ ನಾಡಿನ ಚುಕ್ಕಾಣಿ ಹಿಡಿದು ಮಾಡಿದ ಸಾಧನೆ, ಅವರು ನೀಡಿದ ಕೊಡುಗೆ ಅಪಾರ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಶ್ರೀ ಕೆಂಪೇಗೌಡ ಜಯಂತೋತ್ಸವ ಸಮಿತಿ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೆಂಪೇಗೌಡರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು

ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಿರುವುದರಿಂದ ಇಂದು ವಿಶ್ವ ವಿಖ್ಯಾತಿಯಾಗಿ ಬೆಳೆಯುವುದರ ಮೂಲಕ ಭಾರತದ ಇತಿಹಾಸ ಪುಟದಲ್ಲಿ ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದು ಹೇಳಿದರು.

ಬೆಂಗಳೂರು ಕೋಟೆಯ ದಕ್ಷಿಣ ಭಾಗದ ದಿಡ್ಡಿಬಾಗಿಲ ನಿಲುವಿಗಾಗಿ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯು ಸ್ವತಃ ಆತ್ಮರ್ಪಾಣೆ ಮಾಡುವ ಮೂಲಕ ಬೆಂಗಳೂರು ನಗರ ನಿಮಾರ್ಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು ಎಂದು ತಿಳಿಸಿದರು.

ನಗರದ ಬೆಳವಣಿಗೆ ದೂರದೃಷ್ಟಿಯಿಂದ ಬೆಳ್ಳಿ ಮಂಟಪ (ವಾಣಿಜ್ಯ ಮಂಟಪ), ಇಲ್ಲಂತೆ ಮಂಟಪ (ಆರೋಗ್ಯ ಮಂಟಪ), ನೆಡುಂಕಲ್ ಮಂಟಪ (ದೈವ ಮಂಟಪ), ಚೌಕಿಸ್ಥಾನ ಮಂಟಪ (ಶಿಕ್ಷಾ ಮಂಟಪ) ಹಾಗೂ ಪಾವ ಮಂಟಪ (ನ್ಯಾಯ ಮಂಟಪ)ಗಳನ್ನು ಆಯಾ ಕ್ಷೇತ್ರಕ್ಕನುಗುಣವಾಗಿ ಪಂಚ ಗೋಪುರಗಳನ್ನು ನಿರ್ಮಿಸಿದವರು ಕೆಂಪೇಗೌಡರು ಎಂದು ಹೇಳಿದರು.

ಕೇಂಪೇಗೌಡರು ಬೆಂಗಳೂರು ನಗರ ನಿರ್ಮಾಣ ನಂತರ ವಾಸಿಸಲು ಬರುವ ಜನರಿಗೆ ಕುಡಿಯಲು ನೀರಿಗಾಗಿ ಕೆಂಪಾಬುದಿಕೆರೆ, ಗಿಡ್ಡೆ ಗೌಡರ ಕೆರೆ, ಕಾರಂಜಿ ಕೆರೆ, ಜಕ್ಕರಾಯನಕೆರೆ, ಕೆಂಪಾಪುರ ಅಗ್ರಹಾರದ ಕೆರೆ, ಮಾವಳ್ಳಿ ಸಿದ್ದಾಪುರ ಕೆರೆ ಹೀಗೆ ಇನ್ನು ಅನೇಕ ಕೆರೆಗಳನ್ನು ಸ್ಥಾಪಿಸಿ ಜನರಿಗೆ ಅನುಕೂಲ ಮಾಡಿಕೊಟ್ಟರು ಎಂದು ತಿಳಿಸಿದರು.

ನಗರದ ಮುಂದಿನ ಬೆಳವಣಿಗೆಯ ದೃಷ್ಟಿ ಇಟ್ಟುಕೊಂಡು ಆಯಾ ಕುಲಕಸಬು ಕಲಿತ್ತಿದ್ದ ಜನರಿಗೆ ವ್ಯಾಪರ ಮಾಡಲು ಅನುಕೂಲವಾಗುವಂತೆ ಬಿನ್ನಿಪೇಟೆ, ಚಿಕ್ಕಪೇಟೆ, ಬಳೆ ಪೇಟೆ, ಅಕ್ಕಿಪೇಟೆ, ಮಾಮೂಲ್ ಪೇಟೆ, ಗಾಣಿಗರ ಪೇಟೆ, ನಗರ್ತಪೇಟೆ, ಕಾಟನ್ ಪೇಟೆ, ಸುಲ್ತಾನ್ ಪೇಟೆ, ತಿಗಳರಪೇಟೆ, ಕುಂಬಾರ ಪೇಟೆ, ಗೊಲ್ಲರಪೇಟೆ ಹೀಗೆ ಅನೇಕ ಪೇಟೆಗಳನ್ನು ನಿರ್ಮಿಸಿಕೊಟ್ಟು ಜೀವನ ಮಾಡಲು ದಾರಿ ಮಾಡಿಕೊಡುವುದರ ಮೂಲಕ ವ್ಯಾಪರ ಮಾಡಿಕೊಟ್ಟಿದ್ದರು ಎಂದು ಜಿ.ಟಿ.ದೇವೇಗೌಡ ಬಣ್ಣಿಸಿದರು.

ಕೆಂಪೇಗೌಡರ‌ ಅಭಿವೃದ್ಧಿ ಕಾರ್ಯಗಳನ್ನು ಬಣ್ಣಿಸಿ ಎಲ್ಲಾ ರಾಜಕಾರಣಿಗಳು ಅವರ ಆದರ್ಶಗಳನ್ಯ ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಮಾತನಾಡಿ 15-16 ನೇ ಶತಮಾನದಲ್ಲಿ ಸುಸಜ್ಜಿತ ಬೆಂಗಳೂರು ನಗರವನ್ನು ನಿರ್ಮಾಣ ಮಾಡುವುದರ ಮೂಲಕ ಎಷ್ಟೋ ಜನರ ಜೀವನವನ್ನು ಕಟ್ಟಿಕೊಟ್ಟವರು ಕೆಂಪೇಗೌಡರು ಎಂದು ಹೇಳಿದರು.

ಕೆಂಪೇಗೌಡರು ನಿರ್ಮಾಣ ಮಾಡಿದಂತಹ ಎಲ್ಲಾ ಪೇಟೆಗಳು ಇಂದಿಗೂ ಸಹ ಜೀವಂತವಾಗಿದ್ದು ಇವರು ಮಾಡಿರುವಂತಹ ಸಾಧನೆ ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರವಾದುದು ಎಂದು ಹೇಳಿದರು.

ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಪೂಜ್ಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.

ವೈದ್ಯ ಸಾಹಿತಿ ಅಧ್ಯಕ್ಷರಾದ ಡಾ.ಎಸ್. ಪಿ. ಯೋಗಣ್ಣ ಮಾತನಾಡಿದರು.

ಕೆಂಪೇಗೌಡ ಜಯಂತಿ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೋತೆಗೆ ದ್ವಿತೀಯ ಪಿಯುಸಿ ಹಾಗೂ ಎಸ್. ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರುಗಳಾದ ಸಿ. ಎನ್. ಮಂಜೇಗೌಡ, ಕೆ.ವಿವೇಕಾನಂದ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ಎಸ್.ಶ್ರೀವತ್ಸ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ. ಡಿ ಸುದರ್ಶನ್, ಕೆಂಪೇಗೌಡ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಗೌಡ ಸೇರಿದಂತೆ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.