ಕಾವೇರಿ ಹಾರ್ಟ್ ಅಂಡ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉರುಳಿಸಲು ಯತ್ನ:ಕಿಡಿ

Spread the love

ಹುಣಸೂರು: ಅನ್ಯಾಯಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಹುಣಸೂರು ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ, ಇದಕ್ಕೊಂದು ಸ್ಪಷ್ಟ ಉದಾರಣೆ ಇಂದು ನಡೆದಿದೆ.

ಹುಣಸೂರಿನ ಬೈಪಾಸ್ ರಸ್ತೆಯಲ್ಲಿ ಸ್ಥಾಪನೆಯಾಗಿರುವ ಕಾವೇರಿ ಹಾರ್ಟ್ ಅಂಡ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೊಂಡು ಈಗಾಗಲೇ ಅಗತ್ಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.

ಆದರೆ ನಗರಸಭೆ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ಕಾವೇರಿ ಆಸ್ಪತ್ರೆ ಕಟ್ಟಡವನ್ನು ಉರುಳಿಸಲು ಪೋಲೀಸ ಸರ್ಪಗಾವಲಿನಲ್ಲಿ ಆಗಮಿಸಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತು ಸ್ಥಳೀಯರು ತೀವ್ರ ‌ವಿರೋಧ‌ ವ್ಯಕ್ತಪಡಿಸಿ ಕಟ್ಟಡ ಒಡೆಯುವುದನ್ನು ತಡೆದರು.

ಆಸ್ಪತ್ರೆ ಉರುಳಿಸಲು ಮುಂದಾದಾಗ ಪೊಲೀಸರು ಮತ್ತು ಜನರ ನಡುವೆ ಕೆಲಕಾಲ ವಾಗ್ವಾದ ಕೂಡ ನಡೆಯಿತು.

ಜೆಸಿಬಿ ಸದ್ದು ಮಾಡುವಷ್ಟರಲ್ಲಿ ಜನರ ವಿರೋಧ ಮತ್ತು ಕರ್ನಾಟಕ ಪ್ರಜಾ ಪಾರ್ಟಿಯವರ ವಿರೋಧದಿಂದ ಸದ್ಯಕ್ಕೆ ಹುಣಸೂರು ನಗರಸಭೆ ಅಧಿಕಾರಿಗಳು ಒಂದು ತಿಂಗಳು ಕಾಲಾವಕಾಶ ನೀಡಿ ಕಟ್ಟಡ ಒಡೆಯುವುದರಿಂದ ಹಿಂದೆ ಸರಿದಿದ್ದಾರೆ.

ಹೈ ಕೋರ್ಟ್ ಆದೇಶ ಇರುವುದರಿಂದ ನಾವು ಕಟ್ಟಡ ತೆರವುಗೊಳಿಸುತ್ತಿದ್ದೇವೆ ಎಂಬುದಾಗಿ ನಗರಸಭೆಯವರು ಈಗ ಹೇಳುತ್ತಿದ್ದಾರೆ ಆದರೆ ಕಟ್ಟಡಕ್ಕೆ ಪಾಯ ಹಾಕಿ ಕಟ್ಟಡ ಮೇಲೆ ಏಳುವಾಗ ನಗರಸಭೆಯವರ ಕಣ್ಣಿಗೆ ಬೀಳಲಿಲ್ಲವೇ ಏನು ಮಾಡುತ್ತಿದ್ದರು ಎಂದು ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದರು.