ಮೈಸೂರು: ಸಂಗೀತ ಕಲಿಯಲು ಕರೋಕೆ ಅತಿ ಸರಳ ಮಾಧ್ಯಮವಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಡಾ ನಟರಾಜ್ ಜೋಯಿಸ್ ತಿಳಿಸಿದ್ದಾರೆ.
ನಗರದ ಪುರಭವನದಲ್ಲಿ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಸ್ವರ ಸಂಭ್ರಮ ಕರೋಕೆ ಗಾಯನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಸಂಗೀತ
ಪ್ರೀಯರಾಗಿರುತ್ತಾರೆ. ಆದರೆ, ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ಸಮಯವೂ ಸಿಗುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೋಕೆ ಎಲ್ಲ ಅನುಕೂಲಕರ ಮಾಧ್ಯಮವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕರೋಕೆ ಹೆಚ್ಚು ಪ್ರಚಲಿ- ತವಾಗುತ್ತಿದೆ. ವೃತ್ತಿಪರರು, ಹವ್ಯಾಸಿ ಸಂಗೀತಗಾರರು ತಮ್ಮ ವೃತ್ತಿಯ ಜೊತೆಗೆ ಕರೋಕೆ ಮಾಧ್ಯಮವನ್ನು ಉಪಯೋಗಿಸಿಕೊಂಡು ಸಂಗೀತದಲ್ಲಿ ತಲ್ಲೀನರಾಗಿದ್ದಾರೆ ಎಂದು ಡಾ ನಟರಾಜ್ ಜೋಯಿಸ್ ಹೇಳಿದರು.
ಮನೋ ವಿಜ್ಞಾನಿ ಡಾಕ್ಟರ್ ರೇಖಾ ಮನಃಶಾಂತಿ ಅವರು ಮಾತನಾಡಿ,
ಸಂಗೀತಕ್ಕೆ ತಲೆಬಾಗದವರಿಲ್ಲ, ಎಲ್ಲರ ಮನಸ್ಸನ್ನು ಅರಳಿಸುವ ಶಕ್ತಿ ಸಂಗೀತಕ್ಕಿದೆ ಎಂದು ತಿಳಿಸಿದರು.
ಕೆಲಸ ಮಾಡಿ ದಣಿದಾಗ ಸಂಗೀತ ಆಲಿಸಿದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಉಲ್ಲಾಸ ಉಂಟಾಗಲಿದೆ. ಹಿಂದಿನ ಕಾಲದ ಜನರು ಹೆಚ್ಚಿನ ಸಮಯವನ್ನು ಇದಕ್ಕೆ ಮೀಸಲಿಡುತ್ತಿದ್ದ ಕಾರಣ ದೈಹಿಕ ಶ್ರಮ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿದರು.
ಸಂಗೀತ ಕಲೆಯನ್ನು ಉಳಿಸಿ, ಬೆಳೆಸಬೇಕೆಂಬ ನಿಟ್ಟಿನಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮ ಆಯೋಜಿಸಿ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದನ್ನು ಸರ್ಕಾರ ಗುರುತಿಸಿ ಗೌರವ ನೀಡುವ ಅಗತ್ಯವಿದೆ, ಅದಕ್ಕಾಗಿ ಅರ್ಜಿ ಹಾಕುವ ಸಂಪ್ರದಾಯ ಬಿಡಬೇಕು ಎಂದು ಡಾಕ್ಟರ್ ರೇಖಾ ಮನಃಶಾಂತಿ ಒತ್ತಾಯಿಸಿದರು.
ಕರೋಕೆ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗದಿಂದ 150ಕ್ಕೂ ಹೆಚ್ಚು ಗಾಯಕರು ಆಗಮಿಸಿ ವಿವಿಧ ಚಿತ್ರಗೀತೆಗಳನ್ನು ಹಾಡಿದರು.
ಕಲಾವಿದರು ಹಾಗೂ ಸಮಾಜಸೇವಕರಾದ ಭರತ್ ನಾಯಕ್, ಜಾಯ್, ಸಮಂತ, ಸೈಯದ್ ಗೌಸ್, ಸಚಿನ್ ಎನ್ ವಿ ಎಸ್,ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಕಸ್ತೂರಿ ಚಂದ್ರು, ಕೊಡಗು ಜಿಲ್ಲಾಧ್ಯಕ್ಷರಾದ ಡಾ. ನಯನ ಹರಿಶ್ಚಂದ್ರ, ಮೈಸೂರು ನಗರ ಅಧ್ಯಕ್ಷರಾದ ಡಾಕ್ಟರ್ ಮೌಲ್ಯ ಜೈ ಕುಮಾರ್, ಸಂಸ್ಥಾಪಕ ಕಾರ್ಯದರ್ಶಿ ಡಾಕ್ಟರ್ ತೇಜಸ್ ಪೃಥ್ವಿರಾಜ್, ಜಿಲ್ಲಾಧ್ಯಕ್ಷರಾದ ಅಮೀನಾ ಬೇಗಮ್, ನಟರಾಜ್ ಎಚ್ ಪಿ , ಜಿಲ್ಲಾ ಕಾರ್ಯದರ್ಶಿ ಚೆಲುವರಾಜ್ ಮತ್ತಿತರರು ಪಾಲ್ಗೊಂಡಿದ್ದರು.