ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಸ್ಥಳೀಯ ನಿವಾಸಿಗಳಿಗೆ ಕುಡಿಯುವ ನೀರು, ಆಷಾಢದಲ್ಲಿ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಮತ್ತು ದರ್ಶನದ ಟಿಕೆಟ್ ದರ ಇಳಿಸುವಂತೆ ಆಗ್ರಹಿಸಿ ಕರ್ನಾಟಕ ಸೇನಾಪಡೆಯವರು ಪ್ರತಿಭಟನೆ ನಡೆಸಿದರು.

ಹಳೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಸೇನಾಪಡೆ ಜಿಲ್ಲಾದ್ಯಕ್ಷ ತೇಜೇಶ್ ಲೋಕೇಶ್ ಗೌಡ,ನಾಡ ದೇವತೆ ತಾಯಿ ಚಾಮುಂಡೇಶ್ವರಿ ಬೆಟ್ಟದಲ್ಲಿ ಸರಿಯಾಗಿ ಕುಡಿಯುವ ನೀರು ಇಲ್ಲ,5-6 ದಿನಗಳಿಗೊಮ್ಮೆ ಚಾಮುಂಡಿ ಬೆಟ್ಟಕ್ಕೆ ನೀರನ್ನು ಬಿಡಲಾಗುತ್ತಿದೆ ಹಾಗಾಗಿ ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ ಎಂದು ಹೇಳಿದರು.
ಬಹಳ ವರ್ಷಗಳ ಹಿಂದೆಯೇ ಕುಡಿಯುವ ನೀರಿಗಾಗಿ ಬೆಟ್ಟಕ್ಕೆ ಹೊಸ ಪೈಪ್ ಲೈನ್ ಹಾಕಲು ಕಾಮಗಾರಿ ಶುರು ಮಾಡಿದರೂ, ಇನ್ನೂ ಪೂರ್ಣವಾಗಿಲ್ಲ,ಆದ್ದರಿಂದ ಬೆಟ್ಟದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಸರ್ಕಾರ ಇಷ್ಟೆಲ್ಲಾ ಆದಾಯವಿರುವ ಬೆಟ್ಟಕ್ಕೆ ಸಮರ್ಪಕವಾಗಿ ಪ್ರತಿದಿನ ನೀರು ಬಿಡಬೇಕು ಎಂದು ಆಗ್ರಹಿಸಿದರು.
ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರಿಗೆ ಸರಿಯಾದ ಮೂಲಭೂತ ಸೌಕರ್ಯಗಳೂ ಇಲ್ಲ. ಕುಡಿಯಲು ಶುಚಿಯಾದ ಉಚಿತ ನೀರಿನ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.
ಸುಸಜ್ಜಿತ ಶೌಚಾಲಯಗಳಾಗಲಿ, ಹೊರಗಿನಿಂದ ಬರುವವರಿಗೆ ಮಡಿಯಾಗಿ ದೇವರ ದರ್ಶನ ಮಾಡಲು ಸ್ನಾನದ ಗೃಹಗಳಾಗಲಿ ಇಲ್ಲ, ಈಗಿರುವ ಒಂದೇ ಶೌಚಾಲಯದಲ್ಲಿ 5 ರೂ ನಿಂದ 10 ರೂ. ವಸೂಲಿ ಮಾಡಲಾಗುತ್ತಿದೆ. ಇದನ್ನು ಉಚಿತ ಮಾಡಬೇಕು. ಈಗ ಆಷಾಢದಲ್ಲಂತೂ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಸಮಯದಲ್ಲಿ ಸರ್ಕಾರ ಇವುಗಳ ಬಗ್ಗೆ ಗಮನ ಹರಿಸಿ ಮೂಲಭೂತ ಸೌಕರ್ಯಗಳನ್ನು ಕೂಡಲೇ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು 5 ಬಿಟ್ಟಿ ಭಾಗ್ಯಗಳನ್ನು ಘೋಷಿಸಿ, ಆ ಯೋಜನೆಗಳಿಗೆ ಹಣ ಪೂರೈಸಲು ಆಗದೆ ಈಗ ಚಾಮುಂಡೇಶ್ವರಿ ದೇವಿಯ ಸೇವೆಗಳ ಶುಲ್ಕಗಳನ್ನು (ಅಭಿಷೇಕದ ಶುಲ್ಕವನ್ನು) ಏಕಾಏಕಿ 300 ರೂ ನಿಂದ 550 ರೂ ಗಳಿಗೆ ಏರಿಸಿರುವುದು ಭಕ್ತಾದಿಗಳಿಗೆ ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ತೇಜೇಶ್ ಲೋಕೇಶ್ ಗೌಡ ಹೇಳಿದರು.
ಭಕ್ತರ ಧಾರ್ಮಿಕ ಆಚರಣೆ ಮೇಲೆ ಕಣ್ಣಿಟ್ಟು ಅವರಿಂದ ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಹೊರಟಿರುವುದು ದುರದೃಷ್ಟಕರ, ಸರ್ಕಾರ ತಕ್ಷಷವೇ ಏರಿಸಿರುವ ಅಭಿಷೇಕದ ಶುಲ್ಕವನ್ನು 300 ರೂ. ಗೆ ತರಬೇಕೆಂದು ಒತ್ತಾಯಿಸಿದರು.

ಸರ್ಕಾರ ಈ ವರ್ಷ ಆಷಾಡ ಶುಕ್ರವಾರದ ವಿಶೇಷ ದರ್ಶನಕ್ಕಾಗಿ ಬೆಟ್ಟಕ್ಕೆ 2000 ರೂ ಟಿಕೆಟ್ ಮಾಡಿರುವುದು ಖಂಡನೀಯ ಎಂದು ಪದಾಧಿಕಾರಿಗಳು ಕಿಡಿಕಾರಿದರು.
ಸರ್ಕಾರ ಬಿಟ್ಟಿ ಭಾಗ್ಯಗಳಿಗಾಗಿ ಸಿಕ್ಕ ಸಿಕ್ಕ ಕಡೆಯಿಂದ ಸಾರ್ವಜನಿಕರಿಂದ ಹಣ ಪೀಕಿಸಿ ಹಗಲು ದರೋಡೆ ಮಾಡುತ್ತಿದೆ. ದೇವರ ದರ್ಶನಕ್ಕೆ ಸರಕಾರ ಇಷ್ಟೊಂದು ದುಬಾರಿ ಟಿಕೆಟ್ ಮಾಡಲು ಹೊರಟಿರುವುದು ಅತ್ಯಂತ ನಾಚಿಕೆಗೇಡು,ಸರ್ಕಾರ ಜನರಿಗೆ ಒಂದು ಕೈಯಲ್ಲಿ ಕೊಟ್ಟು ದೇವರ ಹೆಸರಿನಿಂದ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕೂಡಲೇ 2000 ರೂ ದುಬಾರಿ ಟಿಕೆಟ್ ರದ್ದುಗೊಳಿಸಿ, ಹಣದ ಭೇದ ಭಾವವಿಲ್ಲದೆ ಕಳೆದ ವರ್ಷದಂತೆ ದರ್ಶನ ಸಿಗುವ ಹಾಗೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಪ್ರಜೀಶ್.ಪಿ, ಲಕ್ಷ್ಮೀದೇವಿ, ಪ್ರಭುಶಂಕರ್, ಶಿವಲಿಂಗಯ್ಯ, ಕೇಬಲ್ ರಮೇಶ್ , ಸಿಂಧುವಳ್ಳಿ ಶಿವಕುಮಾರ್, ಕೃಷ್ಣೆಗೌಡ, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ಡಾ. ಶಾಂತರಾಜೇ ಅರಸ್, ಲಕ್ಷ್ಮಿ, ನೇಹಾ , ಹನುಮಂತಯ್ಯ, ಭಾಗ್ಯಮ್ಮ, ಕುಮಾರ್ , ಪದ್ಮ, ನಾಗರಾಜ್, ರಾಧಾಕೃಷ್ಣ, ಮೂರ್ತಿ ಲಿಂಗಯ್ಯ, ಬಸವರಾಜ್, ಕುಮಾರ್, ಗಣೇಶ್ ಪ್ರಸಾದ್, ರವಿ ನಾಯಕ್, ಪ್ರದೀಪ್, ಪ್ರಭಾಕರ್,ವಿಷ್ಣು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.