ಕನ್ನಡದಲ್ಲಿ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

Spread the love

ಮೈಸೂರು: ಮೈಸೂರಿನಲ್ಲಿ ಎಲ್ಲಾ ಕಡೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಎಲ್ಲಾ ಅಂಗಡಿ, ಮುಂಗಟ್ಟು, ವ್ಯಾಪಾರ ಮಳಿಗೆಗಳು, ಮಾಲ್ ಗಳು, ಖಾಸಗಿ ಕಚೇರಿಗಳು, ಶಾಲಾ-ಕಾಲೇಜು ಹಾಗೂ ಜಾಹೀರಾತು ಫಲಕಗಳು ಹಾಗೂ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಕನ್ನಡವನ್ನು ಶೇ ೬೦ ಭಾಗ ಪ್ರಧಾನವಾಗಿ, ಕಡ್ಡಾಯವಾಗಿರಬೇಕೆಂದು ಒತ್ತಾಯಿಸಲಾಯಿತು.ಜತೆಗೆ ಕೂಡಲೇ ಮಹಾ ನಗರ ಪಾಲಿಕೆ ಈ‌ ಬಗ್ಗೆ ಕಟ್ಟುನಿಟ್ಟಾಗಿ ಆದೇಶ ಹೊರಡಿಸಬೇಕೆಂದು ಪ್ರತಿಭಟನಾ ನಿರತರು ಅಗ್ರಹಿಸಿದರು.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ – ಕನ್ನಡ ಭಾಷೆಯೇ ಸಾರ್ವಭೌಮ ಭಾಷೆ. ಕನ್ನಡ ನಾಡಿನಲ್ಲಿ ಮೊದಲು ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಬೇಕು ಹಾಗೂ ಕನ್ನಡದಲ್ಲಿ ವ್ಯವಹರಿಸಬೇಕು. ಕನ್ನಡ ಭಾಷೆ ಕಲಿಯಬೇಕು ಇಲ್ಲದಿದ್ದರೆ ನಾವು ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡ ಬಳಸದ ಮಳಿಗೆಗಳಿಗೆ ನೋಟಿಸ್ ನೀಡಿ, ಒಂದು ತಿಂಗಳ ಕಾಲಾವಕಾಶ ಕೊಟ್ಟು ಆ ನಂತರ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಒಂದು ವೇಳೆ ಈ ಕೆಲಸ ನೀವು ಮಾಡದಿದ್ದರೆ, ಮತ್ತೆ ನಮ್ಮ ಸಂಘಟನೆ ಬೀದಿಗಿಳಿದು ಕನ್ನಡ ಬಳಸದ ನಾಮಪಲಕಗಳಿಗೆ ಮಸಿ ಬಳಿಯಲಾಗುವುದೆಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಕೃಷ್ಣಯ್ಯ, ಪ್ರಭುಶಂಕರ್, ಪ್ರಜೀಶ್ ಪಿ, ವರಕೂಡು ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನಾಗರಾಜು, ಸಿಂದುವಳ್ಳಿ ಶಿವಕುಮಾರ್, ಮಹದೇವ ಸ್ವಾಮಿ, ನಂದ ಕುಮಾರ್ ಗೌಡ, ಹನುಮಂತಯ್ಯ, ಮಂಜುಳ, ನೇಹ, ಭಾಗ್ಯಮ್ಮ, ಬೇಬಿ ರತ್ನ, ಎಳನೀರು ರಾಮಣ್ಣ, ರಾಮಕೃಷ್ಣೇಗೌಡ, ರಾಧಾಕೃಷ್ಣ, ರಘು ಅರಸ್, ಗುರು ಮಲ್ಲಪ್ಪ , ಹರೀಶ್ ,ಆನಂದ, ತ್ಯಾಗರಾಜ್, ರವೀಶ್, ಪ್ರಭಾಕರ, ಗಣೇಶ್ ಪ್ರಸಾದ್, ಸ್ವಾಮಿ ಗೌಡ, ವಿಷ್ಣು ಹಾಗೂ ರವಿ ನಾಯಕ ಮುಂತಾದವರು ಪಾಲ್ಗೊಂಡಿದ್ದರು.