ಮೈಸೂರು: ರಾಜ್ಯ ಸರ್ಕಾರ ಅತೀ ಅಗತ್ಯ ವಸ್ತುಗಳಾದ ಹಾಲಿನ ದರ ಹಾಗೂ ವಿದ್ಯುತ್ ದರವನ್ನು ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು
ಯುಗಾದಿ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಹಾಲು ಹಾಗೂ ವಿದ್ಯುತ್ ಶಾಕ್ ನೀಡಿದೆ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತಮ್ಮ ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಅತಿ ಅಗತ್ಯ ವಸ್ತುಗಳ ಬೆಲೆ ಏರಿಕೆಗಳನ್ನು ಮಾಡಿದ್ದು, ಜನರು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಹಗರಣಗಳಲ್ಲಿ ತೊಡಗಿ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ, ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯದೆ ಒಳ ಜಗಳಗಳಲ್ಲೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಕೆಎಸ್ಆರ್ಟಿಸಿ ಮತ್ತು ಬೆಂಗಳೂರು ಮೆಟ್ರೋ ದರ ಏರಿಕೆ ಮಾಡಿದ ಬೆನ್ನಲ್ಲೇ ನಂದಿನಿ ಹಾಲು, ವಿದ್ಯುತ್ ದರವನ್ನು ಏರಿಕೆ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಆಗಿದೆ ಎಂದು ತೇಜೇಶ್ ಲೋಕೇಶ್ ಗೌಡ ಹೇಳಿದರು.
ಕಳೆದ ಫೆಬ್ರವರಿ ತಿಂಗಳಲ್ಲಿ ನಂದಿನಿ ಹಾಲಿಗೆ ಪ್ರತಿ ಲೀಟರ್ ಗೆ 2 ರೂ ಏರಿಕೆ ಮಾಡಿದ್ದ ಸರ್ಕಾರ ಮತ್ತೆ ಈಗ 4 ರೂ ಬೆಲೆ ಏರಿಕೆ ಮಾಡಿದೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನೆಯ ಯಜಮಾನಿಗೆ ಬಿಟ್ಟಿ ಭಾಗ್ಯಲಕ್ಷ್ಮಿ ಭಾಗ್ಯ ತಿಂಗಳಿಗೆ 2,000 ಕೊಟ್ಟು ಹಾಲು ಇನ್ನಿತರ ಪದಾರ್ಥಗಳ ಬೆಲೆ ಏರಿಕೆ ಮೂಲಕ ಅವರಿಂದಲೇ ತಿಂಗಳಿಗೆ 4000 ವಸೂಲಿ ಮಾಡಿ ನೀಡುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಾನ್ ದುರ್ಭಾಗ್ಯ, ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಸರ್ಕಾರಕ್ಕೆ ಕಿಂಚಿತ್ತಾದರೂ ಕನಿಕರವಿದ್ದರೆ ಕೂಡಲೇ ಹಾಲಿನ ದರ ಏರಿಕೆ ಹಾಗೂ ವಿದ್ಯುತ್ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಪ್ರಭುಶಂಕರ್ ಎಂ ಬಿ, ಗೋಲ್ಡನ್ ಸುರೇಶ್, ಪ್ರಜೀಶ್ , ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ,, ಕೃಷ್ಣಪ್ಪ , ಶಿವಲಿಂಗಯ್ಯ, ಮಧುವನ ಚಂದ್ರು, ವೇಣುಗೋಪಾಲ್ ಕೆ, ಹನುಮಂತಯ್ಯ, ನೇಹ ಭಾಗ್ಯಮ್ಮ, ಬಸವರಾಜು, ಬೋಗಾದಿ ಸಿದ್ದೇಗೌಡ, ನಾಗರಾಜು , ರಘು ಅರಸ್, ಎಳನೀರು ರಾಮಣ್ಣ, ರವಿ ಒಲಂಪಿಯಾ, ದರ್ಶನ್ ಗೌಡ, ಪ್ರದೀಪ್ ಆರ್ ಆನಂದ್, ತ್ಯಾಗರಾಜ್, ರವಿ ನಾಯಕ್, ಕುಮಾರ್, ನಾರಾಯಣ ಗೌಡ, ರವೀಶ್ , ರಾಮಕೃಷ್ಣೇಗೌಡ, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.