ಮೈಸೂರು: ನಮ್ಮ ಮುಂದಿನ ಪೀಳಿಗೆ ಇತಿಹಾಸವನ್ನು ಅರಿಯುವ ನಿಟ್ಟಿನಲ್ಲಿ ಈ ನೆಲದ ಇತಿಹಾಸವನ್ನು ಅರಿಯುವಂತಹ ಪಠ್ಯಕ್ರಮವನ್ನು ಶಿಕ್ಷಣದಲ್ಲಿ ಅಳವಡಿಸಬೇಕೆಂದು ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಆರ್. ರಘು ತಿಳಿಸಿದರು.
ನಗರದಲ್ಲಿ ಕರ್ನಾಟಕ ಸೇನಾ ಪಡೆ ಕರ್ನಾಟಕ ಏಕೀಕರಣ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಹಾಗೂ ಕುವೆಂಪು ಅವರ ಸ್ಮರಣೆ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದವರು ಹಾಗೂ ಕನ್ನಡ ನಾಡನ್ನು ಕಟ್ಟಿ ಬೆಳೆಸಿದವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ಸಾಮರಸ್ಯದ ಹೆಸರಿನಲ್ಲಿ ಆಕ್ರಮಣಕಾರಿ ಪ್ರವೃತ್ತಿ ಬೆಳೆಸಿಕೊಳ್ಳದೇ ಇತಿಹಾಸದಲ್ಲಿ ಸಾಕಷ್ಟು ತ್ಯಾಗ ಮಾಡಿದೆ. ಗಡಿ ಪ್ರದೇಶಗಳಲ್ಲಿ ಉದಕಮಂಡಲ(ಊಟಿ), ಕಾಸರಗೋಡು, ಹೊಸೂರು, ನಿಪ್ಪಾಣಿ, ಮೊದಲಾದ ಅಚ್ಚ ಕನ್ನಡ ಪ್ರದೇಶಗಳನ್ನು ರಾಜಕೀಯ ಹಿತಾಸಕ್ತಿ ಇಲ್ಲದೇ ಕಳೆದುಕೊಂಡಿತು, ಕನ್ನಡ ಸಂಸ್ಕೃತಿ ಉಳಿಸಿಕೊಳ್ಳಲು ಎಚ್ಚೆತ್ತುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಬ್ರಿಟಿಷರು ಇಂಗ್ಲೀಷ್ ಹೇರಿದರೆ, ಉತ್ತರ ಭಾರತದವರು ಹಿಂದಿ ಭಾಷೆಯನ್ನು ಹೇರುತ್ತಿದ್ದಾರೆ. ರಾಷ್ಟ್ರಭಾಷೆಯ ಕಲ್ಪನೆಯಿಲ್ಲದ ಕೆಲವರು ಕನ್ನಡವೂ ಹಿಂದಿಯಷ್ಟೇ ಮಾನ್ಯತೆ ಹೊಂದಿರುವ ರಾಷ್ಟ್ರ ಭಾಷೆ ಎಂಬ ವಾಸ್ತವ ಸ್ಥಿತಿ ಅರಿತುಕೊಂಡಿಲ್ಲ ಎಂದು ರಘು ಬೇಸರಪಟ್ಟರು.
ಹಳೆಯ ಮೈಸೂರು ಸಂಸ್ಥಾನ ಕಟ್ಟಿದ ನಮ್ಮ ಮೈಸೂರು ಮಹಾರಾಜರ ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅಪಚಾರವೆಸಗಲಾಗಿದೆ. ಇನ್ನು ಮುಂದಾದರೂ ಈ ಲೋಪ ಸರಿಪಡಿಸುವ ಕಾರ್ಯ ಆಗಲೇಬೇಕಿದೆ ಎಂದು ಒತ್ತಾಯಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡಲು ನಮ್ಮಿಂದ ಆಗಿಲ್ಲ, ಮಾನಸಗಂಗೋತ್ರಿಗೆ 800 ಎಕರೆ ಭೂಮಿ ಧಾರೆ ಎರೆದ ರಾಜಮನೆತನವನ್ನು ನಾವೆಷ್ಟು ಸ್ಮರಿಸಿಕೊಳ್ಳುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಕರ್ನಾಟಕ ಸೇನಾ ಪಡೆ ಈ ರೀತಿಯ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ರಘು ಕೌಟಿಲ್ಯ ಪ್ರಶಂಸಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಕೆವಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಖ್ಯಾತ ಮೂಳೆ ತಜ್ಞರಾದ ಡಾ. ನಂದೀಶ್ ಕುಮಾರ್ ಕೆ ಸಿ, ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಿ ಬಸಪ್ಪ, ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್ , ಕರ್ನಾಟಕ ತೆಂಗಿನ ನಾರಿನ ಅಭಿವೃದ್ಧಿ ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ ಹೆಚ್ ಗೋವಿಂದೇಗೌಡ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ ಬಿ ಲಿಂಗರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಆಲತ್ತೂರು ಜಯರಾಮ್, ಮೈಸೂರು ಚಾಮರಾಜನಗರ ಒಕ್ಕಲಿಗರ ಸಂಘದ ನಿರ್ದೇಶಕ ಎ ಕುಮಾರ್, ಉಮ್ಮತ್ತೂರು ವೀರಗಾಸೆ ಕಲಾವಿದರಾದ ಎಂ ಜಯ ಕುಮಾರ್ ರವರಿಗೆ ಕರ್ನಾಟಕ ಸುವರ್ಣ ಸಂಭ್ರಮ ಸೇವಾ ಪ್ರಶಸ್ತಿಯನ್ನು
ಮೈಸೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್ ಟಿ ಜವರೇಗೌಡ ಅವರು ಪ್ರದಾನ ಮಾಡಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸುಮಾರು ಐವತ್ತು ವಿದ್ಯಾರ್ಥಿನಿಯರಿಗೆ ಕೆಪಿಸಿಸಿ ಸದಸ್ಯರಾದ ಆರ್ ಜೇಸುದಾಸ್ ಪ್ರತಿಭಾ ಪುರಸ್ಕಾರ ಮಾಡಿದರು.
ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಸಂಸ್ಕೃತಿ ಪೋಷಕರಾದ ಡಾ. ರಘುರಾಮ್ ಕೆ ವಾಜಪೇಯಿ, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ ಶ್ರೀನಿವಾಸ ಗೌಡ, ಪ್ರಭುಶಂಕರ್, ಪ್ರೊ. ರಮೇಶ್ ಬಾಬು, ಕೃಷ್ಣಪ್ಪ, ನಾಗರಾಜು, ಶಿವಲಿಂಗಯ್ಯ, ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನೇಹಾ, ಹನುಮಂತಯ್ಯ,ಭಾಗ್ಯಮ್ಮ,ಪ್ರಭಾಕರ್, ಲಕ್ಷ್ಮೀ , ಭಾಗ್ಯಮ್ಮ,ಬೇಬಿ ರತ್ನ, ರಘು ಅರಸ್, ಕುಮಾರ್, ಗಣೇಶ್ ಪ್ರಸಾದ್, ರವೀಶ್, ವಿಷ್ಣು, ವಿಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು.